ರಾಜ್ಯ ಸರ್ಕಾರಕ್ಕೆ ಬಂದ್ ನಡೆಸುವ ನೈತಿಕ ಹಕ್ಕಿಲ್ಲ: ಶ್ರೀರಾಮರೆಡ್ಡಿ
ಚಿಕ್ಕಬಳ್ಳಾಪುರ, ಶನಿವಾರ, 3 ಜುಲೈ 2010( 17:11 IST )
ಬಡವರು, ಜನ ಸಾಮಾನ್ಯರ ಹಿತಾಸಕ್ತಿಗಳನ್ನು ಕಾಪಾಡದ ಕೇಂದ್ರ ಮತ್ತು ರಾಜ್ಯ ಸರಕಾರಗಳಿದ್ದೂ ಏನು ಪ್ರಯೋಜನ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಾಜಿ ಶಾಸಕ ಶ್ರೀರಾಮರೆಡ್ಡಿ ಉಭಯ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಜು. 5ರಂದು ರಾಜ್ಯವ್ಯಾಪಿ ಬಂದ್ ನಡೆಸುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರಕಾರ ತೈಲ ಕಂಪನಿಗಳ ಹಿತಾಸಕ್ತಿ ಕಾಯಲಿಕ್ಕಿದೆಯೋ ಅಥವಾ ಬಡವರ ಹಿತಾಸಕ್ತಿ ಕಾಯುವ ಜವಾಬ್ದಾರಿ ಹೊತ್ತಿದೆಯೇ ಎಂದು ಪ್ರಶ್ನಿಸಿದರು.
ಇದೇ ವೇಳೆ ಬೆಲೆ ಏರಿಕೆಯನ್ನು ವಿರೋಧಿಸುತ್ತಿರುವ ಬಿಜೆಪಿಗೆ ಜನಸಾಮಾನ್ಯರ ಮೇಲೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ರಾಜ್ಯ ತೆರಿಗೆ ಮತ್ತು ಸೆಸ್ ಕಡಿತಗೊಳಿಸಬಹುದಿತ್ತು. ಆದರೆ ಮಧ್ಯರಾತ್ರಿಯಿಂದಲೇ ಬಸ್ ದರವನ್ನು ಏರಿಕೆ ಮಾಡಿರುವ ರಾಜ್ಯ ಸರಕಾರಕ್ಕೆ ಕೇಂದ್ರದ ವಿರುದ್ಧ ಪ್ರತಿಭಟಿಸುವ ಯಾವ ನೈತಿಕ ಹಕ್ಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಆರು ತಿಂಗಳಲ್ಲಿ ಎರಡನೇ ಬಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರ ಉರುವಲಿಗೆ ಆಧಾರವಾದ ಸೀಮೆಎಣ್ಣೆ ಬೆಲೆಯನ್ನೂ ಹೆಚ್ಚಿಸಿದೆ. ಪ್ರಧಾನಮಂತ್ರಿ ಮತ್ತು ಕೇಂದ್ರ ಸರಕಾರಕ್ಕೆ, ಜತೆಗೆ ರಾಜ್ಯ ಸರಕಾರಕ್ಕೆ ಬಡವರು, ಜನಸಾಮಾನ್ಯರ ಹಿತಾಸಕ್ತಿ ಕಾಯುವ ಜವಾಬ್ದಾರಿಯೇ ಇಲ್ಲವೇ? ಸಬ್ಸಿಡಿಗಳೆಲ್ಲವನ್ನೂ ಕಿತ್ತುಕೊಳ್ಳುವ ಮೂಲಕ ಹೊಡೆತವನ್ನು ನೀಡಿದ್ದಾಯಿತು. ಹಣದುಬ್ಬರದಿಂದ ಅವಶ್ಯಕ ಸಾಮಗ್ರಿಗಳ ಬೆಲೆ ಗಗನಮುಖಿಯಾಗಿರುವ ನಡುವೆಯೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನೂ ಏರಿಸಿ ಜನಸಾಮಾನ್ಯರ ಬದುಕನ್ನು ನರಕವನ್ನಾಗಿ ಮಾಡಲಾಗಿದೆ ಎಂದು ಶ್ರೀರಾಮರೆಡ್ಡಿ ದೂರಿದರು.