ರಾಜ್ಯ ಸರ್ಕಾರದ ಅಸಹಕಾರಕ್ಕೆ ಮನನೊಂದು ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದ ನ್ಯಾ.ಸಂತೋಷ್ ಹೆಗ್ಡೆಯವರು ಕೊನೆಗೂ ಮಹತ್ವದ ಬದಲಾವಣೆ ಎಂಬಂತೆ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರ ಮಾತಿಗೆ ಬೆಲೆ ಕೊಟ್ಟು ತನ್ನ ರಾಜೀನಾಮೆಯನ್ನು ವಾಪಸ್ ಪಡೆಯುವುದಾಗಿ ಶನಿವಾರ ಘೋಷಿಸಿದ್ದಾರೆ.
ಇಂದು ಬಿಜೆಪಿಯ ಹಿರಿಯ ಮುಖಂಡರಾದ ಎಲ್.ಕೆ.ಆಡ್ವಾಣಿಯವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ನ್ಯಾ.ಸಂತೋಷ್ ಹೆಗ್ಡೆಯವರು ರಾಜೀನಾಮೆಯನ್ನು ವಾಪಸ್ ಪಡೆಯಬೇಕು. ಅಲ್ಲದೇ ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂಬ ಭರವಸೆಯನ್ನು ಕೊಟ್ಟಿದ್ದರು.
ಅದಕ್ಕೆ ಪೂರಕ ಎಂಬಂತೆ ಸಂಜೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖುದ್ದಾಗಿ ಸಂತೋಷ್ ಹೆಗ್ಡೆಯವರ ನಿವಾಸಕ್ಕೆ ತೆರಳಿ, ರಾಜೀನಾಮೆಯನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡರು. ಅದೇ ರೀತಿ ಲೋಕಾಯುಕ್ತರು ಕೇಳಿದ ಬೇಡಿಕೆಯನ್ನು ಶೀಘ್ರವೇ ಈಡೇರಿಸುವುದಾಗಿಯೂ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದ್ದರು.
PTI
ನಿನ್ನೆಯಷ್ಟೇ ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವರಾದ ಸುರೇಶ್ ಕುಮಾರ್, ವಿ.ಎಸ್.ಆಚಾರ್ಯ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನ್ಯಾ.ಸಂತೋಷ್ ಹೆಗ್ಡೆಯವರನ್ನು ಭೇಟಿಯಾಗಿ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಮನವೊಲಿಸಿದ್ದರು. ಆದರೆ ತಾನು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ತಮಗೆ ಗೊತ್ತಿದೆ. ಆ ನಿಟ್ಟಿನಲ್ಲಿ ತನ್ನ ನಿರ್ಧಾರ ಅಚಲವಾಗಿದ್ದು, ರಾಜೀನಾಮೆ ವಾಪಸ್ ಪಡೆಯೋದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಆ ನಿಟ್ಟಿನಲ್ಲಿ 11 ದಿನಗಳ ರಾಜೀನಾಮೆ ಬಿಕ್ಕಟ್ಟು ಬಗೆಹರಿದಂತಾಗಿದೆ.
ಆಡ್ವಾಣಿ ನನ್ನ ತಂದೆಗೆ ಸಮಾನ-ಹೆಗ್ಡೆ: ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ಕೊಟ್ಟ ನಂತರ ನನ್ನ ನಿರ್ಧಾರ ಅಚಲ ಎಂದು ಹೇಳಿದ್ದೆ. ಇದೀಗ ಏಕಾಏಕಿ ನನ್ನ ನಿರ್ಧಾರವನ್ನು ನೀವು ಪ್ರಶ್ನಿಸಿಬಹುದು. ನಾನು ಹಿರಿಯರಾದ ಎಲ್.ಕೆ.ಆಡ್ವಾಣಿಯವರ ಮಾತಿಗೆ ಬೆಲೆ ಕೊಟ್ಟು ನನ್ನ ರಾಜೀನಾಮೆ ಹಿಂಪಡೆಯುವ ನಿರ್ಧಾರಕ್ಕೆ ಬಂದಿದ್ದೇನೆ. ಯಾಕೆಂದರೆ ಆಡ್ವಾಣಿ ಅವರು ನನ್ನ ತಂದೆ ಸಮಾನ, ನನ್ನ ತಂದೆಯ ನಿಕಟವರ್ತಿಯಾಗಿದ್ದವರು ಅವರು, ಅವರ ಮಾತನ್ನು ಮೀರಿ ಹೋಗುವಂತಹ ಧೈರ್ಯ, ಉದ್ದಟತನ ನನ್ನಲ್ಲಿ ಇಲ್ಲ ಎಂದು ಸಿಎಂ, ಗಡ್ಡರಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಲೋಕಾಯುಕ್ತಕ್ಕೆ ನಾನು ಕೇಳಿದ ಬೇಡಿಕೆಯನ್ನು ಈಡೇರಿಸುವುದಾಗಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ. ಕೆಲವೊಮ್ಮೆ ಭರವಸೆಯನ್ನು ನಂಬಬೇಕಾಗುತ್ತದೆ. ಹಾಗಾಗಿ ಅವರು ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಾರೆಂಬ ನಂಬಿಕೆ ನನಗೆ ಇದೆ ಎಂದರು.
ರಾಜೀನಾಮೆ ವಾಪಸ್ ಪಡೆಯುವ ನಿಟ್ಟಿನಲ್ಲಿ ತಾನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿಯಾಗಿ, ತನ್ನ ರಾಜೀನಾಮೆ ಹಿಂಪಡೆದು, ಲೋಕಾಯುಕ್ತನಾಗಿ ಮುಂದುವರಿಯುವುದಾಗಿ ಈ ಸಂದರ್ಭದಲ್ಲಿ ಹೇಳಿದರು.