ಪಶ್ಚಿಮ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರ ಶಿಕ್ಷಕರ ಕ್ಷೇತ್ರ ಸೇರಿದಂತೆ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಬಸವರಾಜ ಹೊರಟ್ಟಿ ಸತತವಾಗಿ ಆರನೇ ಬಾರಿ ಜಯಭೇರಿ ಬಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶನಿವಾರ ಮತ ಎಣಿಕೆ ನಡೆದಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕುಬೇರಪ್ಪ ಅವರನ್ನು 2011 ಮತಗಳ ಅಂತರದಿಂದ ಸೋಲಿಸಿದರು. ಹೊರಟ್ಟಿ 6504 ಮತಗಳಿಸಿ ಗೆಲುವಿನ ನಗು ಬೀರಿದರೆ, ಕುಬೇರಪ್ಪ 4,493ಮತ ಪಡೆದು ಸೋಲನ್ನುಂಡಿದ್ದಾರೆ.
ಅಶ್ಲೀಲ ಪದ ಬಳಕೆ, ಮತ ಎಣಿಕೆ ವಿಳಂಬ: ಮತ್ತೊಂದೆಡೆ ತೀವ್ರ ಕುತೂಹಲ ಕೆರಳಿಸಿದ್ದ ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ರಾತ್ರಿ 9ಗಂಟೆ ತನಕವೂ ಮುಂದುವರಿದಿದ್ದು, ಗೊಂದಲ, ಜಟಾಪಟಿಗಳಿಂದಾಗಿ ಫಲಿತಾಂಶ ಘೋಷಣೆ ವಿಳಂಬವಾಗಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಪದವೀಧರ ಕ್ಷೇತ್ರದ ಮತಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ ಗೋ.ಮಧುಸೂಧನ್ ಮುನ್ನಡೆ ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿರುವ ಜೆಡಿಎಸ್‌ನ ಶ್ರೀಕಂಠೇಗೌಡ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಅಲ್ಲದೇ ದಕ್ಷಿಣ ಪದವೀಧರ ಕ್ಷೇತ್ರದ ನಾಲ್ಕು ಸಾವಿರ ಮತಗಳು ಕುಲಗೆಟ್ಟಿವೆ. ಆ ಕಾರಣದಿಂದಾಗಿ ಅಭ್ಯರ್ಥಿಗಳ ಗೆಲುವನ್ನು ನಿರ್ಧರಿಸಲು ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ಮಾಡಲಾಗುತ್ತಿದೆ.
ಅವೆಲ್ಲಕ್ಕಿಂತ ಮುಖ್ಯವಾಗಿ ದಕ್ಷಿಣ ಪದವೀಧರ ಕ್ಷೇತ್ರದ ಮತದಾರರು ಮತ ಪತ್ರದಲ್ಲಿ ಅಶ್ಲೀಲ ಪದಗಳನ್ನು ಬಳಸಿರುವುದು ನಿಜಕ್ಕೂ ಅವಮಾನದ ಸಂಗತಿ ಎಂದು ಬಿಜೆಪಿ, ಜೆಡಿಎಸ್ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಏಜೆಂಟರ್ ನಡುವೆ ಜಟಾಪಟಿ ನಡೆದಿದ್ದು, ಮತ ಎಣಿಕೆ ಕಾರ್ಯ ಮುಂದುವರಿದಿದೆ. ಮತ ಎಣಿಕೆ ನಂತರ ಡಾ.ಎಂ.ಪಿ.ನಾಡಗೌಡ, ವಾಟಾಳ್ ನಾಗರಾಜ್ ಸೇರಿದಂತೆ ಹುರಿಯಾಳುಗಲ ಹಣೆಬರಹ ಬಯಲಾಗಲಿದೆ.