ಅಯೋಧ್ಯೆಲ್ಲಿನ ಶ್ರೀರಾಮ ಮಂದಿರಕ್ಕಾಗಿ ಕಳೆದ ನೂರಾರು ವರ್ಷಗಳಲ್ಲಿ ಲಕ್ಷಾಂತರ ಮಂದಿ ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ, ಹಾಗಾಗಿ ರಾಮಮಂದಿರ ಅಯೋಧ್ಯೆಯ ಹೊರತು ಬೇರೆಲ್ಲೂ ನಿರ್ಮಿಸಲು ಸಾಧ್ಯವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಭಾರತ ಸಂಸ್ಕೃತಿ ಪ್ರತಿಷ್ಠಾನ ಆಯೋಜಿಸಿದ್ದ 'ರಾಮ ಜನ್ಮಭೂಮಿ ಹೋರಾಟ- ವಿವಿಧ ಮಜಲುಗಳು ಮತ್ತು ಪರಿಹಾರ' ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
PTI
ರಾಮ ಅಯೋಧ್ಯೆಯಲ್ಲೇ ಹುಟ್ಟಿದ್ದು ಮತ್ತು ರಾಜ್ಯಭಾರ ನಡೆಸಿದ್ದು ಎನ್ನುವುದು ವಿವಾದಾತೀತ. ಹಾಗಾಗಿಯೇ ಅಯೋಧ್ಯೆಯೆನ್ನುವುದು ಪವಿತ್ರ ಸ್ಥಳ ಎಂದು ಕರೆಯಲ್ಪಟ್ಟಿದೆ. ಪ್ರಾಚೀನ ಕಾಲದಿಂದಲೂ ಅಲ್ಲಿ ದೇವಸ್ಥಾನವಿತ್ತು. ಅದಕ್ಕಾಗಿ ಕಳೆದ ನಾಲ್ಕು ಶತಮಾನಗಳಲ್ಲಿ ನಡೆದ 76ಕ್ಕೂ ಹೆಚ್ಚು ಹೋರಾಟಗಳಲ್ಲಿ ಕನಿಷ್ಠ ನಾಲ್ಕು ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತೊಗಾಡಿಯಾ ಹೇಳಿದರು.
ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು. ಇದಕ್ಕಾಗಿ ಮುಸ್ಲಿಮರು ಮತ್ತು ಕ್ರೈಸ್ತರು ಹಿಂದೂಗಳನ್ನು ಬೆಂಬಲಿಸಬೇಕು, ಅವರ ಭಾವನೆಗಳನ್ನು ಗೌರವಿಸಬೇಕು. ಇದಕ್ಕೆ ಯಾರೂ ಒಪ್ಪಿಗೆ ನೀಡಲು ಸಿದ್ಧರಿಲ್ಲ ಎನ್ನುವುದಾದರೆ ಸಂವಿಧಾನಕ್ಕೆ ತಿದ್ದುಪಡಿ ತಂದಾದರೂ ಮಂದಿರ ನಿರ್ಮಿಸಲಿ ಎಂದು ಅವರು ಸಲಹೆ ನೀಡಿದ್ದಾರೆ.
ಅಯೋಧ್ಯೆಯಲ್ಲಿದ್ದ ರಾಮ ಮಂದಿರವನ್ನು ಧ್ವಂಸಗೊಳಿಸಿದ್ದು ಈ ರಾಷ್ಟ್ರದ ಮೇಲೆ ನಿರಂತರವಾಗಿ ನಡೆದಿದ್ದ ದಾಳಿಗೆ ಒಂದು ಸಾಕ್ಷಿ. ಅದು ಈಗಲೂ ಎಲ್ಲಾ ಹಂತಗಳಲ್ಲೂ ನಡೆಯುತ್ತಿದೆ. ಹಿಂದೂಗಳನ್ನು ತುಳಿಯಲು ಯತ್ನಿಸಲಾಗುತ್ತಿದೆ. ಹಾಗಾಗಿ ರಾಮ ಮಂದಿರ ನಿರ್ಮಾಣ ಪ್ರಸ್ತಾಪವನ್ನು ಕೈ ಬಿಡಲು ಸಾಧ್ಯವೇ ಇಲ್ಲ ಎಂದು ತೊಗಾಡಿಯಾ ಸ್ಪಷ್ಟಪಡಿಸಿದರು.