ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿದ್ದರಾಮಯ್ಯ, ಬಂಗಾರಪ್ಪ ಮಾಡಿದ್ದೇನು?: ಈಶ್ವರಪ್ಪ ಪ್ರಶ್ನೆ (KS Eshwarappa | Sidharamaih | Congress | Karnataka)
Bookmark and Share Feedback Print
 
ಸಿದ್ದರಾಮಯ್ಯ ಮಾತೆತ್ತಿದರೆ ತಾನು ಕುರುಬರ ನಾಯಕ, ಬಂಗಾರಪ್ಪ ತಾನು ಈಡಿಗರ ನಾಯಕ, ಹಿಂದುಳಿದವರ ಏಳ್ಗೆಗಾಗಿ ಶ್ರಮಿಸುವವರು ಎಂದು ಹೇಳುತ್ತಿದ್ದಾರೆ, ಅವರು ಇದುವರೆಗೆ ಮಾಡಿದ್ದೇನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಸಿದ್ದರಾಮಯ್ಯ ತಾನು ಹಿಂದುಳಿದ ವರ್ಗದ ನಾಯಕೆಂದು ಬೀಗುತ್ತಿದ್ದಾರೆ; ಅವರು ಹಣಕಾಸು ಸಚಿವರಾಗಿದ್ದಾಗ ಕನಕದಾಸರ ಕಾಗಿನೆಲೆ ಯಾಕೆ ನೆನಪಾಗಲಿಲ್ಲ? ಇದಕ್ಕೆ ಯಡಿಯೂರಪ್ಪನೇ ಮುಖ್ಯಮಂತ್ರಿಯಾಗಿ ಬರಬೇಕಾಯಿತೇ? ಕನಕ ಜಯಂತಿಯಂದು ಸರಕಾರಿ ರಜೆ ಘೋಷಿಸಲೂ ಬಿಜೆಪಿ ಸರಕಾರವೇ ಬೇಕಾಯಿತೇ ಎಂದೆಲ್ಲ ತರಾಟೆಗೆ ತೆಗೆದುಕೊಂಡರು.

ನಂತರ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರನ್ನೂ ಈಶ್ವರಪ್ಪ ತನ್ನ ಮಾತಿಗೆ ಎಳೆದು ತಂದರು. ಅವರು ಈಡಿಗರ ನಾಯಕ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಕೋಟಿ-ಚೆನ್ನಯ್ಯ ನೆನಪಾಗಲಿಲ್ಲ. ನೇಕಾರರು, ಕುಂಬಾರರು, ಗೊಲ್ಲರು, ಅಗಸರು ಸೇರಿದಂತೆ ಹಲವು ಸಮಾಜಗಳ ಅಭಿವೃದ್ಧಿಗೆ ಶ್ರಮಿಸಿದ್ದು ಯಡಿಯೂರಪ್ಪನವರ ಸರಕಾರವೇ ಹೊರತು, ಕಾಂಗ್ರೆಸ್ ಸರಕಾರಗಳಲ್ಲ. ಇನ್ನು ಜೆಡಿಎಸ್ ಎಂಬ ಅಪ್ಪ ಮಕ್ಕಳ ಪಕ್ಷದ ಕುರಿತು ಮಾತನಾಡದಿರುವುದೇ ಉತ್ತಮ. ಅಲ್ಲಿ ಅವರಿಗೆ ಬಿಟ್ಟು ಬೇರೆಯವರಿಗೆ ಅವಕಾಶ ಎಲ್ಲಿದೆ ಎಂದು ಮೂದಲಿಸಿದರು.

ಇದು ಬಿಜೆಪಿ ಆಯೋಜಿಸಿರುವ ಹಿಂದುಳಿದ ವರ್ಗಗಳ ಸಮಾವೇಶವಾದರೂ ಎಲ್ಲಾ ಜಾತಿಗಳ ನಾಯಕರೂ ಇಲ್ಲಿ ಭಾಗವಹಿಸಿದ್ದಾರೆ ಎಂದ ಅವರು, ಇತ್ತೀಚೆಗೆ ನಡೆದಿದ್ದ ಹಿಂದುಳಿದವರ ಸಮಾವೇಶದಲ್ಲಿ ಅದೇ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಉಗ್ರಪ್ಪ ಬಿಟ್ಟರೆ ಬೇರೆ ನಾಯಕರು ಭಾಗವಹಿಸಿರಲಿಲ್ಲ. ದೇಶಪಾಂಡೆ, ಡಿ.ಕೆ. ಶಿವಕುಮಾರ್, ಎಂ.ವಿ. ರಾಜಶೇಖರ್ ಮುಂತಾದವರು ಆಗ ಎಲ್ಲಿ ಹೋಗಿದ್ದರು. ಅವರಿಗೆ ಸಮಯಾವಕಾಶ ಇರಲಿಲ್ಲವೇ ಎಂದು ಲೇವಡಿ ಮಾಡಿದರು.

ಹಿಂದುಳಿದ ವರ್ಗಗಳ ನಾಯಕರೆಂದು ಚಪ್ಪರಿಸಿಕೊಳ್ಳುವ ಸಿದ್ದರಾಮಯ್ಯ ಕುರುಬರಿಗೆ ಮಾತ್ರ ಸೀಮಿತ, ಬಂಗಾರಪ್ಪ ಈಡಿಗರಿಗೆ ಮಾತ್ರ. ಆದರೆ ಯಡಿಯೂರಪ್ಪ ಹಾಗಲ್ಲ. ಅವರು ನಮ್ಮೆಲ್ಲರ ಸರ್ವೋತ್ತಮ ನಾಯಕರಾಗಿ ಹೊರ ಹೊಮ್ಮಿದ್ದಾರೆ. ನಮ್ಮದು ಓಟ್ ಬ್ಯಾಂಕ್ ರಾಜಕಾರಣವಲ್ಲ. ಖಂಡಿತಾ ಮುಂದಿನ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸುತ್ತದೆ, ಆಗಲೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ