ನನ್ನ ಬಳಿ ಬರುವ ಅಗತ್ಯವಿಲ್ಲ: ಕಾಂಗ್ರೆಸ್ಸಿಗರಿಗೆ ರಾಜ್ಯಪಾಲ
ಹಾಸನ, ಸೋಮವಾರ, 5 ಜುಲೈ 2010( 11:24 IST )
ಆಡಳಿತಾರೂಢ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಬಗ್ಗೆ ದೂರನ್ನು ಹಿಡಿದುಕೊಂಡು ರಾಜಭವನಕ್ಕೆ ಬರುತ್ತಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ರಾಷ್ಟ್ರಪತಿಗಳ ಪ್ರತಿನಿಧಿಯೇ ವಿನಾ ಪಕ್ಷದ ವಕ್ತಾರನಲ್ಲ. ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಕುಂದು-ಕೊರತೆಗಳಿದ್ದರೂ ಕೂಡ ಅದರ ಬಗ್ಗೆ ವಿಧಾನಸಭೆಯಲ್ಲಿಯೇ ಧ್ವನಿ ಎತ್ತಬೇಕು. ಅದನ್ನು ಬಿಟ್ಟು ನನ್ನ ಬಳಿ ಬರಬೇಡಿ ಎಂದು ವಿರೋಧ ಪಕ್ಷದವರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಶ್ರವಣಬೆಳಗೊಳ, ಬೇಲೂರು, ಹಳೇಬೀಡು ಪ್ರವಾಸಕ್ಕಾಗಿ ಜಿಲ್ಲೆಗೆ ಆಗಮಿಸಿದ್ದ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ವಿರೋಧ ಪಕ್ಷದವರ ರಾಜಭವನ ಭೇಟಿ ಕುರಿತಂತೆ ಈ ರೀತಿಯಾಗಿ ಪ್ರತಿಕ್ರಿಯಿಸಿದರು. ಅಲ್ಲದೇ ರಾಜ್ಯದ ನಾಲ್ಕು ಮಂದಿ ಸಚಿವರು ಅಕ್ರಮ ಗಣಿಗಾರಿಕೆಯ ಹೆಸರಲ್ಲಿ ಕೊಳ್ಳೆ ಹೊಡೆಯುತ್ತಿರುವುದನ್ನು ಗಮನಿಸಿ ಸುಮ್ಮನಿರಲು ಸಾಧ್ಯವಿಲ್ಲ. ಹಾಗಾಗಿ ಅಕ್ರಮ ಗಣಿ ವಿಚಾರದ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಅಕ್ರಮ ಗಣಿಗಾರಿಕೆ ಕುರಿತಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಉಗ್ರಪ್ಪ ಸೇರಿದಂತೆ ಮುಂತಾದ ಮುಖಂಡರು ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.