ನ್ಯಾ.ಹೆಗ್ಡೆ ಮತ್ತೆ ರಾಜೀನಾಮೆ ಕೊಡ್ತಾರೆ:ಸಿಂಧ್ಯಾ ಭವಿಷ್ಯ
ಗುಲ್ಬರ್ಗ, ಸೋಮವಾರ, 5 ಜುಲೈ 2010( 15:13 IST )
ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ರಾಜೀನಾಮೆಯನ್ನು ವಾಪಸ್ಸು ಪಡೆದ ಮಾತ್ರಕ್ಕೆ ಎಲ್ಲ ಸಮಸ್ಯೆ ಪರಿಹಾರ ಆದಂತೆ ಅಲ್ಲ, ಮತ್ತೆ ಮುಂದಿನ ದಿನಗಳಲ್ಲಿ ಅವರು ರಾಜ್ಯದ ಜನತೆಗೆ ಎತ್ತಿ ತೋರಿಸಿದ್ದ ಪ್ರಶ್ನೆಗಳು ಚರ್ಚೆಯಾಗಿಯೇ ಉಳಿಯಲಿವೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ನುಡಿದರು.
ಜೆಡಿಎಸ್ ಸ್ಪಂದನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಗುಲ್ಬರ್ಗಕ್ಕೆ ಆಗಮಿಸಿದ್ದ ಅವರು, ಪತ್ರಕರ್ತರ ಜತೆ ಮಾತನಾಡಿದ ಅವರು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮತ್ತೆ ಸರಕಾರದ ಮೇಲೆ ಒತ್ತಡ ಹೇರುತ್ತಾರೆ. ಆಗ ಭಿನ್ನಮತ ಕಾಣಿಸಿಕೊಂಡು ಅವರು ಮೂರು ತಿಂಗಳೊಳಗೆ ರಾಜೀನಾಮೆ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಲೋಕಾಯುಕ್ತ ನ್ಯಾ.ಹೆಗ್ಡೆ ಯಾರ ಒತ್ತಡಕ್ಕೂ ಮಣಿಯುವ ವ್ಯಕ್ತಿಯಲ್ಲ. ಅವರು ನೇರವಾಗಿ ಜೇನುಗೂಡಿಗೆ ಕೈಹಾಕಿದ್ದಾರೆ. ಹೀಗಾಗಿ ಈ ಸರಕಾರ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಲ್ಲ. ಕದನದ ಬಾಗಿಲು ಮತ್ತೆ ತೆರೆದುಕೊಳ್ಳಲಿದೆ, ಈ ಸರಕಾರದ ಮಾನ ಹರಾಜು ಆಗಲಿದೆ ಎಂದು ಹೇಳಿದರು.
ಲೋಕಾಯುಕ್ತರು ಮುಂದುವರಿಯಬೇಕಾದರೆ ವರದಿ ಜಾರಿಗೊಳಿಸಬೇಕು, ಜಾರಿಗೊಂಡರೆ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡಬೇಕಾಗುತ್ತದೆ. ಬಳ್ಳಾರಿಯ ಮೂವರು ಮಂತ್ರಿಗಳ ರೆಕ್ಕೆ-ಪುಕ್ಕ ಕತ್ತರಿಸುವ ರಾಜಕೀಯ ಧೈರ್ಯ ಮುಖ್ಯಮಂತ್ರಿಗಿದೆಯೇ ಎಂದು ಪ್ರಶ್ನಿಸಿದರು. ಇದ್ದರೆ ಪ್ರದರ್ಶನ ಮಾಡಿ ಸಂಪುಟದಿಂದ ಕೈಬಿಟ್ಟು ಸಿಬಿಐ ತನಿಖೆಗೆ ವಹಿಸಿಕೊಡಲಿ ಎಂದು ಸವಾಲು ಹಾಕಿದರು.