ಜನಜೀವನ ಅಸ್ತವ್ಯಸ್ತ, ಕಲ್ಲುತೂರಾಟ: ರಾಜ್ಯದಲ್ಲಿ ಬಂದ್ ಯಶಸ್ವಿ
ಬೆಂಗಳೂರು, ಸೋಮವಾರ, 5 ಜುಲೈ 2010( 19:05 IST )
ತೈಲ ಬೆಲೆ ಏರಿಕೆ ವಿರೋಧಿಸಿ, ಎನ್‌ಡಿಎ ಮತ್ತು ಎಡಪಕ್ಷಗಳು ದೇಶಾದ್ಯಂತ ಕರೆಕೊಟ್ಟಿರುವ ಬಂದ್ ರಾಜ್ಯದಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು, ಬೆಂಗಳೂರು ನಗರದ ಸೇರಿದಂತೆ ರಾಜ್ಯದ ಹಲವೆಡೆ ಬಂದ್‌ಗೆ ಸಂಪೂರ್ಣ ಬೆಂಬಲ ದೊರೆತಿದೆ.
ಬಿಜೆಪಿ ಕಾರ್ಯಕರ್ತರು ಬೈಕ್ ರಾಲಿ, ರೈಲ್ವೆ ನಿಲ್ದಾಣಕ್ಕೆ ಕಾರ್ಯಕರ್ತರ ಮುತ್ತಿಗೆ, ಬಿಜೆಪಿ ಶಾಸಕರು, ಸಂಸದರು ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ, ಟೈರ್‌ಗಳಿಗೆ ಬೆಂಕಿಹಚ್ಚಿ ಪ್ರತಿಭಟಿಸಿದರು. ಬಿಜೆಪಿ ಶಾಸಕರಿಂದ ಬಸವೇಶ್ವರ ಪ್ರತಿಮೆ ಸಮೀಪ ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಚಿವ ರಾಮಚಂದ್ರಗೌಡ ಅವರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಬಸವೇಶ್ವರ ನಗರದ ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ಕಾಲ್ನಡಿಗೆಯಲ್ಲೇ ಹೊರಟು ವಿಶಿಷ್ಟ ರೀತಿಯಲ್ಲಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.
ಶಾಲಾ-ಕಾಲೇಜುಗಳು ಸ್ವಯಂಪ್ರೇರಿತ ಬಂದ್, ಜೆಡಿಯುನಿಂದ ಮೈಸೂರು ಬ್ಯಾಂಕ್ ಬಳಿ ಪ್ರತಿಭಟನೆ, ಆಟೋ-ಬಸ್‌ಗಳಿಲ್ಲದೆ ಪ್ರಯಾಣಿಕರ ಪರದಾಟ, ಜನಸಾಮಾನ್ಯರ ನಿತ್ಯ ಜೀವನ ಅಸ್ತವ್ಯಸ್ತ, ಸರ್ಕಾರಿ ನೌಕರರುಗಳು ಬಹುತೇಕ ಕಚೇರಿಗಳಿಗೆ ಗೈರು ಹಾಜರಾದ ಸನ್ನಿವೇಶ, ತೆರೆಯದ ಹೋಟೆಲ್‌ಗಳು, ಮುಚ್ಚಿದ ಅಂಗಡಿ-ಮುಂಗಟ್ಟು ಕೆಲವಡೆ ಬಲವಂತವಾಗಿ ಮುಚ್ಚಿಸಿದ ಅಂಗಡಿಗಳು, ನಗರದೆಲ್ಲೆಡೆ ಕಟ್ಟೆಚ್ಚರ ಮುಂತಾದ ಘಟನೆಗಳು ಬೆಂಗಳೂರು ನಗರದಲ್ಲಿ ನಡೆದ ಬಂದ್ ವೇಳೆ ಕಂಡುಬಂದವು.
ಹೈಕೋರ್ಟ್‌ನಲ್ಲಿ ಜನಜಂಗುಳಿ ಇರಲಿಲ್ಲ. ಸಿಟಿ ಸಿವಿಲ್ ಕೋರ್ಟ್ ಆವರಣ ಕೂಡ ಜನಜಂಗುಳಿಯಿಂದ ಮುಕ್ತವಾಗಿತ್ತು. ವಿಕಾಸಸೌಧ, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಗೋಪುರ ಸೇರಿದಂತೆ ಹಲವು ಕಚೇರಿಗಳು ಖಾಲಿ, ಖಾಲಿ ಹೊಡೆಯುತ್ತಿದ್ದವು.
ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಆಂಬುಲೆನ್ಸ್ ಸೇವೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ತೈಲ ಬೆಲೆ ಏರಿಸಿರುವುದರಿಂದ ಸರಕು-ಸಾಗಣೆ ವಾಹನಗಳ ಲಾರಿ ಮಾಲೀಕರು, ಗೂಡ್ಸ್ ಟೆಂಪೋ ಮಾಲೀಕರು ಕೂಡ ಬಂದ್‌ಗೆ ಬೆಂಬಲ ನೀಡಿದ್ದರಿಂದ ರಸ್ತೆಗಳು, ಹೆದ್ದಾರಿಗಳು ಬಿಕೋ ಎನ್ನುತ್ತಿದ್ದವು.
ಲಿಂಗರಾಜಪುರ ಬಳಿ ದುಷ್ಕರ್ಮಿಗಳು ಬಸ್‌ಗೆ ಕಲ್ಲು ತೂರಾಟ ನಡೆಸಿ ಅಡ್ಡಿಪಡಿಸಿದರು. ಹನುಮಂತನಗರದ ಶ್ರೀನಗರದಲ್ಲಿ ಎರಡು ಬಸ್‌ಗಳ ಮೇಲೆ, ಜಯನಗರ 5ನೆ ಬ್ಲಾಕ್‌ನಲ್ಲಿ ಒಂದು ಬಸ್ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ ಘಟನೆ ವರದಿಯಾಗಿದೆ. ಯಲಹಂಕದ ಮದರ್ ಡೈರಿಯ ಸಮೀಪ ಎರಡು ಬಸ್‌ಗಳನ್ನು ಜಖಂಗೊಳಿಸಲಾಗಿದೆ. ಡೈರಿ ಸರ್ಕಲ್ ಬಳಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ವಾಹನ ಸಂಚಾರಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾದ ಘಟನೆಯೂ ನಡೆಯಿತು.
ನಗರದಲ್ಲಿ ಬಸ್ ಸಂಚಾರ ಸೇವೆ ಆರಂಭ: ಬಂದ್ ಅವಧಿ ಸಂಜೆ 6 ಗಂಟೆಗೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಮತ್ತೆ ಆರಂಭವಾಗಿದ್ದು, ವ್ಯಾಪಾರ ವಹಿವಾಟು, ಅಂಗಡಿ-ಮುಂಗಟ್ಟುಗಳು ತೆರೆದಿದೆ. ರಾಜ್ಯದ ಎಲ್ಲೆಡೆ ಮತ್ತೆ ಬಸ್ ಸಂಚಾರ ಆರಂಭಗೊಂಡಿದ್ದು, ಎಂದಿನಂತೆ ವ್ಯಾಪಾರ, ವಹಿವಾಟು ಮುಂದುವರಿದಿದೆ.