ರಾಸಲೀಲೆ ಪ್ರಕರಣದಲ್ಲಿ ಸುಮಾರು 53 ದಿನಗಳ ಕಾಲ ಸೆರೆಮನೆ ವಾಸ ಅನುಭವಿಸಿದ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಇದೇ ಮೊದಲ ಬಾರಿಗೆ ಬಿಡದಿ ಆಶ್ರಮದಲ್ಲಿ ಪ್ರವಚನ ಆರಂಭಿಸಿದ್ದಾರೆ. ಪ್ರವಚನ ಕೇಳಲು ಭಕ್ತರ ದಂಡು ಹರಿದು ಬಂದಿದೆ.
ಜೈಲಿನಿಂದ ಬಿಡುಗಡೆಗೊಂಡ ನಂತರ ಯಾವುದೇ ರೀತಿಯ ಪ್ರವಚನ, ದೊಡ್ಡ ಸಮಾರಂಭದಲ್ಲಿ ಭಾಗವಹಿಸಬಾರದು ಎಂದು ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದ ಸಂದರ್ಭದಲ್ಲಿ ಸೂಚನೆ ನೀಡಿತ್ತು. ಆದರೆ ಧಾರ್ಮಿಕ ಚಟುವಟಿಕೆ ಮತ್ತು ಪ್ರವಚನ ಮೇಲೆ ವಿಧಿಸಿದ್ದ ನಿರ್ಬಂಧ ತೆಗೆದುಹಾಕುವಂತೆ ನಿತ್ಯಾನಂದ ಹೈಕೋರ್ಟ್‌ಗೆ ಮನವಿ ಮಾಡಿದ್ದನ್ನು ಪುರಸ್ಕರಿಸಿತ್ತು.
ಭಾನುವಾರ ನಿತ್ಯಾನಂದ ಪ್ರವಚನ ಆರಂಭಿಸುವ ಮೂಲಕ ಧ್ಯಾನಪೀಠಂನಲ್ಲಿ ಹಿಂದಿನ ಚಟುವಟಿಕೆಗಳು ಗರಿಗೆದರಿವೆ. ಕಳೆದ ಕೆಲವು ದಿನಗಳಿಂದ ಮಂಕಾಗಿದ್ದ ಮಠದಲ್ಲಿ ಈಗ ಮತ್ತೆ ಲವಲವಿಕೆ ವಾತಾವರಣ ಮರುಕಳಿಸಿದೆ. ರಾಸಲೀಲೆ ಪ್ರಕರಣ ಬಹಿರಂಗವಾದ ನಂತರ ಮಠಬಿಟ್ಟು ಹೋಗಿದ್ದ ಭಕ್ತರು ಈಗ ಪುನಃ ಮರಳಿ ಬಂದಿದ್ದಾರೆ.
ನಿತ್ಯಾನಂದನ ಪ್ರವಚನ ಕೇಳಲು ವಿದೇಶಗಳಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಏತನ್ಮಧ್ಯೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೆಚ್ಚಿನ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಜುಲೈ 24ರಂದು ನಿತ್ಯಾನಂದ ಭಕ್ತರ ಸಮ್ಮುಖದಲ್ಲಿ ಬಿಡದಿಯಿಂದ ಕೆಂಗೇರಿವರೆಗೆ ಪಾದಯಾತ್ರೆ ಮಾಡಿ ಧಾರ್ಮಿಕ ಜಾಗೃತಿ ಮೂಡಿಸಲಿದ್ದಾರೆ. ಈ ಪಾದಯಾತ್ರೆಯಲ್ಲಿ ನಿತ್ಯಾನಂದನ ಹಲವಾರು ಭಕ್ತರು ಕೂಡ ಪಾಲ್ಗೊಳ್ಳಲಿದ್ದಾರೆ.