ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟ ಪ್ರಕರಣಗಳ ಹಿಂದೆ ಹಿಂದೂ ಸಂಘಟನೆಗಳ ಕೈವಾಡ ಇದೆ ಎಂಬ ಬಗ್ಗೆ ಮಾಧ್ಯಮ ವರದಿಯೊಂದು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ಸಮಾರಂಭದಲ್ಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವ ರಾಮಚಂದ್ರ ಗೌಡ ವೇದಿಕೆಯಿಂದ ಹೊರನಡೆದ ಘಟನೆ ಭಾನುವಾರ ನಡೆದಿದೆ.
ಘಟನೆ ವಿವರ: ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಎಂ.ಪಿ.ಪ್ರಕಾಶ್ ಅವರ 70ನೇ ವರ್ಷದ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರು ಕೂಡ ಭಾಗವಹಿಸಿದ್ದರು.
ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ಮಾತನಾಡುತ್ತ, ಪ್ರಕಾಶ್ ಅವರು ನನಗೆ ತಂದೆ ಸಮಾನ, ಸಭೆಯಲ್ಲಿ ಜನತಾಪರಿವಾರದ ನಾಯಕರಿದ್ದಾರೆ. ಆದರೆ ಈಶ್ವರಪ್ಪ, ಗೌಡ ಬಿಜೆಪಿಯವರು. ಆದರೂ ನನ್ನ ಭಾವನೆಯನ್ನು ವ್ಯಕ್ತಪಡಿಸುತ್ತೇನೆ ಎಂದರು.2007ರಿಂದ ಇತ್ತೀಚೆಗೆ ದೇಶದಲ್ಲಿ ಸಂಭವಿಸಿದ ಭಯೋತ್ಪಾದಕ ಚಟುವಟಿಕೆ ಹಿಂದೆ ಹಿಂದೂ ಸಂಘಟನೆ ಕೈವಾಡ ಇರುವುದಾಗಿ ಔಟ್ ಲುಕ್ ಪತ್ರಿಕೆ ವರದಿ ಮಾಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರು ಪ್ರಸ್ತಾಪಿಸಿದರು.
ಇದರಿಂದ ಸಮಾರಂಭದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, ರಾಮಚಂದ್ರ ಗೌಡ, ಇದೇನು ಅಭಿನಂದನಾ ಸಮಾರಂಭವೋ, ರಾಜಕೀಯ ವೇದಿಕೆಯೋ ಎಂದು ಆಕ್ಷೇಪಿಸಿದರು. ಇಲ್ಲ ನಾವು ಇಲ್ಲಿ ಇರುವುದು ಸರಿಯಲ್ಲ ಎಂದು ಹೇಳಿ ಇಬ್ಬರೂ ಸಮಾರಂಭದಿಂದ ನಿರ್ಗಮಿಸಿದರು. ಕೆಲವರು ಸಮಾಧಾನ ಪಡಿಸಲು ಯತ್ನಿಸಿದರಾದರೂ ಕೂಡ ಯಾರ ಮಾತಿಗೂ ಕಿವಿಗೊಡದ ಅವರು ಹೊರನಡೆದರು.
ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಕುಮಾರಸ್ವಾಮಿ ಈಶ್ವರಪ್ಪನವರೇ ಕ್ಷಮಿಸಿ ಎಂದರು. ಆದರೆ ಈಶ್ವರಪ್ಪ ಮತ್ತು ಗೌಡ ಪ್ರಕಾಶ್ ಅವರಿಗೆ ಅಭಿನಂದನೆ ಹೇಳಿ, ಸಮಾರಂಭದಲ್ಲಿ ಉಪಸ್ಥಿತರಿದ್ದ ಪೇಜಾವರಶ್ರೀಗಳ ಆಶೀರ್ವಾದ ಪಡೆದು ಹೊರಟರು.
ನಂತರ ಆಶೀರ್ವಚನ ನೀಡಿದ ಪೇಜಾವರಶ್ರೀಗಳು, ಹಿಂದೂಗಳ ಭಯೋತ್ಪಾದನೆ ಆತಂಕಕಾರಿ. ಆದರೆ ಈಗ ನಡೆಯುತ್ತಿರುವುದು ಮುಸ್ಲಿಂ ಭಯೋತ್ಪಾದನೆ. ಹಿಂದೂಗಳ ಬಗ್ಗೆ ಆಕ್ಷೇಪ ಎತ್ತುವ ಚಿಂತಕರು ಮತ್ತು ರಾಜಕಾರಿಣಿಗಳು ಮುಸ್ಲಿಂ ಭಯೋತ್ಪಾದನೆ ಕುರಿತೂ ಅಷ್ಟೇ ಜೋರಾಗಿ ಧ್ವನಿ ಎತ್ತಬೇಕು ಎಂದರು. ಹಿಂದೂ ಭಯೋತ್ಪಾದನೆ ನಡೆದಿರಬಹುದು. ಆದರೆ ಅದು ದೊಡ್ಡದಾಗಲು ಬಿಡಬಾರದು. ನಾನು ಲೋಹಿಯಾ ಮತ್ತು ಜೆಪಿ ಅವರ ತತ್ವದಿಂದ ಆಕರ್ಷಿತನಾದವ, ಗಾಂಧಿವಾದಿ ಜೊತೆಗೆ ಹಿಂದುತ್ವವೂ ಇದೆ ಎಂದು ಹೇಳಿದರು. ಆಗ ಕುಮಾರಸ್ವಾಮಿ ಕುಳಿತಲ್ಲಿಯೇ ಸ್ವಾಮೀಜಿಗೆ ನಮನ ಸಲ್ಲಿಸಿದರು.