ಅಕ್ರಮ ಗಣಿಗಾರಿಕೆ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಂಬಂಧ ಶೀಘ್ರವೇ ನಾನಾ ಸಂಘಟನೆ ಜತೆ ಚರ್ಚಿಸಿ ದಿನಾಂಕ ಗೊತ್ತುಪಡಿಸಲಾಗುವುದು ಎಂದರು.
ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ನಡೆಸಬೇಕು. ಈ ಬಗ್ಗೆ ರಾಜ್ಯಪಾಲರು ಕೇಂದ್ರದ ಗಮನ ಸೆಳೆಯಬೇಕು. ಗಣಿಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ವಿರುದ್ಧ ನೀಡಿದ ವರದಿ ಅನುಷ್ಠಾನಗೊಳಿಸಲು ವಿಳಂಬ ಮಾಡುತ್ತಿರುವ ಔಚಿತ್ಯವಾದರೂ ಏನು ? ಸರಕಾರ ಗಣಿಧಣಿಗಳನ್ನು ಯಾವ ರೀತಿ ರಕ್ಷಿಸುತ್ತಿದೆ ಎಂಬುದಕ್ಕೆ ವರದಿ ಅನುಷ್ಠಾನದ ಕುರಿತು ಅದರ ನಿರ್ಲಕ್ಷ್ಯದ ಧೋರಣೆಯೇ ಸಾಕ್ಷಿ ಎಂದು ಆರೋಪಿಸಿದರು.
ಗಣಿ ಧಣಿಗಳು ಸದನದಲ್ಲಿ ರೌಡಿಗಳಂತೆ ವರ್ತಿಸಿದ್ದಾರೆ. ಇವರುಗಳ ವರ್ತನೆ ಸದನದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ದಾಖಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.