ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿ ಎಂಇಎಸ್ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನೆಗೆ ಕರವೇ ಅಡ್ಡಿಪಡಿಸಿದಾಗ ಉಂಟಾದ ಘರ್ಷಣೆ ತಪ್ಪಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆಯಿತು.
ಸುಮಾರು ಎರಡು ಸಾವಿರದಷ್ಟು ಎಂಇಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿ, ಗಡಿವಿವಾದ ಕುರಿತಂತೆ ಕೇಂದ್ರ ಸರ್ಕಾರ ರಾಜ್ಯದ ಪರ ಅಫಿಡವಿತ್ ಸಲ್ಲಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದರು. ಏತನ್ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಎಂಇಎಸ್ ಪ್ರತಿಭಟನೆಗೆ ಅಡ್ಡಿಪಡಿಸಿದರು. ನಂತರ ಎಂಇಎಸ್ ಕಾರ್ಯಕರ್ತರು ಡಿಸಿ ಕಚೇರಿ ಮೇಲೆ ಭಗವಾಧ್ವಜ ಹಾರಿಸಲು ಯತ್ನಿಸಿದಾಗ, ಪೊಲೀಸರು ಅದನ್ನು ತಡೆಯಲು ಮುಂದಾದರು. ಆಗ ಪೊಲೀಸ್ ಮತ್ತು ಎಂಇಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಲಾಠಿಪ್ರಹಾರ ನಡೆಸಿದರು.
ಪೊಲೀಸರನ್ನು ತಳ್ಳಿ ಭಗವಾಧ್ವಜ ಹಾರಿಸಲು ಮುಂದಾದಾಗ ಪೊಲೀಸರು ಎಂಇಎಸ್ ಕಾರ್ಯಕರ್ತರನ್ನು ಅಟ್ಟಾಡಿಸಿ ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ನಂತರ ಅದಕ್ಕೆ ಪ್ರತಿಯಾಗಿ ಕರವೇ ಕಾರ್ಯಕರ್ತರು ಎಂಇಎಸ್ ವಿರುದ್ಧವೇ ಪ್ರತಿಭಟನೆ ನಡೆಸಿ, ಡಿಸಿ ಕಚೇರಿ ಮೇಲೆ ಕನ್ನಡ ಧ್ವಜ ಹಾರಿಸಿದರು. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಕೂಡ ಸಾಥ್ ಕೊಟ್ಟರು.