ನನ್ನ ವಿರುದ್ಧ ವ್ಯವಸ್ಥಿತ ಸಂಚು ನಡೆಸಲಾಗಿದೆ. ಅದಕ್ಕೆ ವೆಂಕಟೇಶ್ ಮೂರ್ತಿ ಮತ್ತು ಚಂದ್ರಾವತಿಯನ್ನು ದಾಳವಾಗಿ ಬಳಸಿಕೊಂಡಿರುವುದಾಗಿ ಸ್ನೇಹಿತನ ಪತ್ನಿ ಮೇಲಿನ ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದ್ದು, ಇದರ ಹಿಂದೆ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಕೈವಾಡ ಇರುವುದಾಗಿ ಎಸ್.ಬಂಗಾರಪ್ಪ ಅವರ ಹೆಸರನ್ನು ಹೇಳದೆ ಆಕ್ರೋಶ ವ್ಯಕ್ತಪಡಿಸಿದರು.
ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ಪಡೆದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದರು. ನಂತರ ಶಿವಮೊಗ್ಗ ಕ್ಷೇತ್ರವನ್ನು ಬಿಟ್ಟು ಹೊರ ಹೋಗಬಾರದು ಎಂಬ ನ್ಯಾಯಾಲಯ ವಿಧಿಸಿದ್ದ ಷರತ್ತನ್ನು ಹೈಕೋರ್ಟ್ ತೆರವುಗೊಳಿಸಿತ್ತು.
ಆ ನಿಟ್ಟಿನಲ್ಲಿ ಸೋಮವಾರ ಸಾಗರ, ಸೊರಬದ ಕೆಲವು ದೇವಾಲಯಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಲಾಗಿದೆ. ಆದರೆ ತನಗೆ ನ್ಯಾಯಾಲಯದಲ್ಲಿ ನ್ಯಾಯ ದೊರೆಯುವ ಭರವಸೆ ಇದೆ ಎಂದರು.
ನಾನು ಮತ್ತೆ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ನನ್ನನ್ನು ರಾಜಕೀಯವಾಗಿ ಮುಗಿಸಲು ಕುತಂತ್ರಿಗಳು ಷಡ್ಯಂತ್ರ ನಡೆಸಿದ್ದರು ಎಂದ ಹಾಲಪ್ಪ, ಮಾಜಿ ಮುಖ್ಯಮಂತ್ರಿ ಅದರ ಪ್ರಮುಖ ಸೂತ್ರಧಾರಿ ಎಂದು ಬಂಗಾರಪ್ಪನವರ ಹೆಸರನ್ನು ಉಲ್ಲೇಖಿಸದೆ ಹೇಳಿದರು.
ಕಳೆದ ನಲ್ವತ್ತು ವರ್ಷಗಳಿಂದ ಸೊರಬದಲ್ಲಿ ಅಧಿಕಾರ ಚಲಾಯಿಸುತ್ತ ಬಂದಿದ್ದ ಅವರಿಗೆ, ಇದೀಗ ನನ್ನ ಗೆಲುವು ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಆ ನಿಟ್ಟಿನಲ್ಲಿ ನನ್ನನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಇಂತಹ ನಾಟಕ ಆಡಿರುವುದಾಗಿ ಆರೋಪಿಸಿದರು.