ರಾಜ್ಯದ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದ ಕಾಂಗ್ರೆಸ್, ಜೆಡಿಎಸ್ ಶಾಸಕರು ಸೋಮವಾರ ವಿಧಾನಮಂಡಲದ ಉಭಯ ಸದನಗಳಲ್ಲೂ ಅಹೋರಾತ್ರಿ ಧರಣಿ ನಡೆಸಿದ ಘಟನೆ ನಡೆದಿದೆ.
ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ರಾತ್ರಿ ವಿಧಾನಸೌಧದಲ್ಲೇ ಠಿಕಾಣಿ ಹೂಡಿದರು. ಅಲ್ಲೇ ಊಟೋಪಚಾರ ಪೂರೈಸಿ, ನಿದ್ದೆಗೆ ಶರಣಾದರು. ಮಂಗಳವಾರ ಬೆಳಿಗ್ಗೆ ಎದ್ದು ವಿಧಾನಸೌಧದ ಆವರಣದಲ್ಲಿಯೇ ವಾಕಿಂಗ್ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕರು ಕೂಡ ಜೊತೆಗಿದ್ದರು.
ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸೋಮವಾರ ಕೂಡ ಧರಣಿ ನಡೆಸಿದರು. ಅಲ್ಲದೇ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಕೂಡ ವಿಫಲವಾಗಿತ್ತು. ಕಲಾಪವನ್ನು ಎರಡು ಬಾರಿ ಮುಂದೂಡಲಾಗಿತ್ತು. ಸಂಜೆ 6ಗಂಟೆಗೆ ಪುನಃ ಸಭೆ ಆರಂಭಗೊಂಡಾಗ ವಿಪಕ್ಷ ಸದಸ್ಯರು ಧರಣಿ ಮುಂದುವರಿಸಿದರು.
ವಿಧಾನಪರಿಷತ್‌ನಲ್ಲಿ ಮಧ್ಯಾಹ್ನ ಕಲಾಪ ಆರಂಭವಾದಾಗ ಲೋಕಾಯುಕ್ತ ರಾಜೀನಾಮೆ ಮತ್ತು ಅಕ್ರಮ ಗಣಿಗಾರಿಕೆ ವಿಚಾರ ಕುರಿತು ಉತ್ತರ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಕ್ರಮ ಗಣಿಗಾರಿಕೆ ತನಿಖೆ ಸಿಬಿಐಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದರು. ಇದರಿಂದ ಕೆರಳಿದ ಪ್ರತಿಪಕ್ಷಗಳು ಸ್ಪಷ್ಟೀಕರಣ ಕೊಡುವಂತೆ ಪಟ್ಟು ಹಿಡಿದರು. ಏತನ್ಮಧ್ಯೆ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಚರ್ಚೆ ಅಂತ್ಯಗೊಂಡಿದ್ದು, ಸದನ ಮುಂದೂಡಲಾಗಿದೆ ಎಂದರು.
ನಂತರ ಸಭಾಪತಿ ಪೀಠದ ಬಳಿ ಧರಣಿ ಆರಂಭಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು, ಸರ್ಕಾರ ಸಿಬಿಐ ತನಿಖೆ ನಿರ್ಧಾರ ಪ್ರಕಟಿಸುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಘೋಷಿಸಿದವು.
ವಿಧಾನಸಭೆಯಲ್ಲಿ ಕಳೆದ ಶುಕ್ರವಾರ ರೆಡ್ಡಿ ಬ್ರದರ್ಸ್ ಮತ್ತು ಬಳಗ ಪ್ರತಿಪಕ್ಷಗಳ ಮೇಲೆ ಏರಿಬಂದ ಪ್ರಕರಣ ಒಂದು ಅಹಿತಕರ ಘಟನೆ, ಅದಕ್ಕಿಂತಲೂ ಮುಖ್ಯವಾಗಿ ರಾಜ್ಯದ ಸಂಪತ್ತು ಲೂಟಿಯಾಗಿರುವ ಬಗ್ಗೆ ತನಿಖೆ ನಡೆಯಬೇಕು. ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 20ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಲೋಕಾಯುಕ್ತ ತನಿಖೆಯಿಂದ ಪೂರ್ಣ ಸತ್ಯ ಹೊರಬರಲು ಸಾಧ್ಯವಿಲ್ಲ. ಸಿಬಿಐ ತನಿಖೆಯಿಂದ ಮಾತ್ರ ಅಕ್ರಮ ಗಣಿಗಾರಿಕೆಯ ಕರ್ಮಕಾಂಡ ಬಯಲಿಗೆ ಬರಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಒಟ್ಟಾರೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಅಹೋರಾತ್ರಿ ವಿಧಾನಸೌಧದಲ್ಲೇ ಧರಣಿ ನಡೆಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರೆ. ರಾಜಕೀಯ ಮತ್ತು ಸಾರ್ವಜನಿಕ ವಲಯದಿಂದ ಪರ-ವಿರೋಧ ಹೇಳಿಕೆಗಳು ಕೇಳಿ ಬರತೊಡಗಿವೆ.