ವಿಧಾನಸಭೆಯ ಕಲಾಪದಲ್ಲಿ ಕಳೆದ ಶುಕ್ರವಾರ ನಡೆದ ಶಾಸಕರ ಜಟಾಪಟಿ ಪ್ರಕರಣದ ವಿಚಾರಣೆಗೆ ಸದನ ಸಮಿತಿ ರಚಿಸಲಾಗುವುದು ಎಂದು ಸ್ಪೀಕರ್ ಬೋಪಯ್ಯ ಸೋಮವಾರ ತಿಳಿಸಿದ್ದಾರೆ.
ಸದನ ಸಮಿತಿಗೆ ಯಾರನ್ನು ಸದಸ್ಯರನ್ನಾಗಿ ನೇಮಿಸಬೇಕು ಎಂಬುದರ ಬಗ್ಗೆ ಎಲ್ಲ ಪಕ್ಷಗಳ ಮುಖಂಡರೊಂದಿಗೆ ಸಮಾಲೋಚಿಸಲಾಗುವುದು ಎಂದರು.
ಈ ಸಮಿತಿ ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ಬೋಪಯ್ಯ ತಿಳಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಐವರು ಸದಸ್ಯರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಶಾಸಕರು ಸೋಮವಾರ ಕೂಡ ವಿಧಾನಮಂಡಲದ ಕಲಾಪದಲ್ಲಿ ಧರಣಿ ಮುಂದುವರಿಸಿದ್ದರು.
ಆ ನಿಟ್ಟಿನಲ್ಲಿ ಎರಡು ಬಾರಿ ಸದನವನ್ನು ಮುಂದೂಡಿದ ಸ್ಪೀಕರ್ ನಂತರ ಎಲ್ಲ ಪಕ್ಷಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ ಸದನ ಸಮಿತಿ ರಚಿಸುವ ನಿರ್ಧಾರ ಪ್ರಕಟಿಸಿದರು.