ಸರಕಾರಿ ಸಂಸ್ಥೆಗಳಿಗೆ ಗೃಹರಕ್ಷಕ ದಳವನ್ನು ಭದ್ರತೆಗೆ ಒದಗಿಸಲು ಸಿದ್ಧ ಎಂದು ಹೋಂಗಾರ್ಡ್ ಡಿಐಜಿ ಮತ್ತು ಸಿಜಿ, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕಿ ಜೀಜಾ ಮಾಧವನ್ ಹರಿಸಿಂಗ್ ತಿಳಿಸಿದರು.
ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ ಭದ್ರತೆಗೆ ಒದಗಿಸಲಾಗಿರುವ ಗೃಹ ರಕ್ಷಕ ದಳ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಯಾವುದೇ ರಾಜ್ಯ ಮತ್ತು ಕೇಂದ್ರ ಸರಕಾರದ ಸಂಸ್ಥೆಗಳು ಸಂಬಳ ನೀಡುವುದಾದರೆ ಗೃಹ ರಕ್ಷಕ ಸಿಬ್ಬಂದಿಯನ್ನು ಭದ್ರತೆಗೆ ಒದಗಿಸಲಾಗುವುದು. ಅದಕ್ಕೆ ಅನುಮತಿ ಪಡೆದುಕೊಳ್ಳಬೇಕು ಎಂದರು.
ಈಗಾಗಲೇ ಇಂಥದೊಂದು ಪ್ರಯತ್ನವನ್ನು ಬೆಂಗಳೂರಿನ ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಯಲ್ಲಿ ಮಾಡಲಾಗಿದೆ. ಆದರೆ ಸರಕಾರಿ ಸಂಸ್ಥೆಯಾಗಿರುವ ಕೆ.ಆರ್.ಆಸ್ಪತ್ರೆಯಲ್ಲಿ ಅಧಿಕ ಸಂಖ್ಯೆಯಲ್ಲಿ 55 ಮಂದಿ ಸಿಬ್ಬಂದಿಯನ್ನು ನಿಯೋಜಿಸಿರುವುದು ರಾಜ್ಯದಲ್ಲೇ ಪ್ರಥಮ. ಪ್ರಸ್ತಾವನೆ ನೀಡಿದರೆ ಚೆಲುವಾಂಬ, ಪಿಕೆಟಿಬಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೂ ಭದ್ರತೆ ಒದಗಿಸಲಾಗುವುದು. ಭದ್ರತೆಗೆ ಮಹಿಳಾ ಸಿಬ್ಬಂದಿಯನ್ನೂ ನೇಮಿಸಿಕೊಳ್ಳಬೇಕಿದೆ ಎಂದರು.
ಗೃಹ ರಕ್ಷಕ ದಳವು ರಾಜ್ಯ ಮತ್ತು ಕೇಂದ್ರ ಸರಕಾರದ ನೆರವಿಗೆ ನಿಲ್ಲುವ ಶಿಸ್ತುಬದ್ಧ ಸಂಸ್ಥೆ. ಗ್ರಾಮೀಣ ಭಾಗದ ನಿರುದ್ಯೋಗಿ ಯುವಜನತೆಗೆ ಅಗತ್ಯ ತರಬೇತಿ ನೀಡಿ ಸೇವೆಗೆ ಸಜ್ಜುಗೊಳಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ, ರಕ್ಷಣೆ, ಪ್ರವಾಹ ಮತ್ತಿತರ ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.