ರಾಜ್ಯದ ಪಶ್ಚಿಮ ಘಟ್ಟ ಸೇರಿದಂತೆ ದೇಶದ ಬಹಳಷ್ಟು ಕಡೆ ಅಭಿವೃದ್ಧಿಯ ಹೆಸರಿನಲ್ಲಿ ಹಸಿರು ನಾಶ ಆಗುತ್ತಿದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವ ಜೈರಾಮ್ ರಮೇಶ್ ಹೇಳಿದರು.
'ಹಸಿರು ಭಾರತ ಮಿಷನ್' ಕರಡು ವರದಿ ತಯಾರಿಕೆ ಸಂಬಂಧ ಸಚಿವಾಲಯ ಮೈಸೂರಿನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಲಹೆ-ಅಹವಾಲು ಆಲಿಕೆ ಸಭೆಯಲ್ಲಿ ಅವರು ಮಾತನಾಡಿದರು.
ಅರಣ್ಯ ಹಾಗೂ ಅರಣ್ಯೇತರ ಭೂಮಿಗಳಲ್ಲಿ ಹೆಚ್ಚುತ್ತಿರುವ ಗಣಿಗಾರಿಕೆ, ಅದರಿಂದ ವನ್ಯ ಸಂಪತ್ತು ಹಾಗೂ ವನ್ಯ ಜೀವಿಗಳಿಗೆ ಆಗಿರುವ ಅಪಾಯ ತಡೆಗೆ 'ಹಸಿರು ಭಾರತ ಮಿಷನ್' ಪರಿಹಾರ ಸೂಚಿಸಬೇಕು ಎಂಬ ಸಾರ್ವಜನಿಕರ ಸಲಹೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, 'ನಾವು ಹಸಿರು ಭಾರತ ಮಿಷನ್ ಕುರಿತು ಮಾತನಾಡುವ ಹೊತ್ತಲ್ಲಿಯೇ, ಹಸಿರು ನಾಶ ಮಿಷನ್ ಕೂಡ ಜಾರಿಯಲ್ಲಿ ಇರುತ್ತದೆ ಎಂಬುದರ ಅರಿವಿದೆ ಎಂದರು.
ಅಲ್ಲದೆ, ಗಣಿಗಾರಿಕೆ, ವಿದ್ಯುತ್ ಸ್ಥಾವರ ನಿರ್ಮಾಣದ ಹೆಸರಿನಲ್ಲಿ ಅರಣ್ಯ ಭೂಮಿಯನ್ನು ನಾಶ ಮಾಡಲಾಗುತ್ತಿದೆ. ಆದರೆ, ಇದೇ ಮಾತನ್ನು ವಿದ್ಯುತ್ ಸರಬರಾಜು ವಿಷಯದಲ್ಲಿ, ಬ್ರಾಡ್‌ಗೇಜ್ ನಿರ್ಮಾಣ ಕಾರ್ಯದಲ್ಲಿ ಅನಿವಾರ್ಯ. ಆದರೆ ಕೆಲವೊಂದು ಸಂದರ್ಭ ಹೇಳಲು ಬರುವುದಿಲ್ಲ. ಅಭಿವೃದ್ಧಿಯೊಂದಿಗೆ ನಾವೂ ರಾಜಿಯಾಗಬೇಕಿದೆ ಎಂದು ಹೇಳಿದರು.
ಕೇಂದ್ರ ಸರಕಾರ ಅರಣ್ಯೀಕರಣಕ್ಕೆ ಒತ್ತು ನೀಡಿದೆ. ಹೆಚ್ಚು ಅರಣ್ಯ ಭೂಮಿ ಹೊಂದಿರುವ ರಾಜ್ಯಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಬಜೆಟ್‌ನಲ್ಲಿ 5000 ಕೋಟಿ ರೂ. ಹಣ ಇಡಲಾಗಿದೆ. ಆದರೆ, ರಾಜ್ಯ ಸರಕಾರಗಳು ಅಭಿವೃದ್ಧಿಯ ಹಿಂದೆ ಬಿದ್ದಿವೆ ಎಂದು ಮಾರ್ಮಿಕವಾಗಿ ನುಡಿದರು.