ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಬಿಐಗೆ ಒಪ್ಪಿಸಲ್ಲ-ಸಿಎಂ: ಧರಣಿ ಕೈಬಿಡಲ್ಲ-ವಿಪಕ್ಷಗಳ ಪಟ್ಟು (BJP | Yeddyurappa | Congress | JDS | Siddaramaiah | CBI | Revanna)
ಸಿಬಿಐಗೆ ಒಪ್ಪಿಸಲ್ಲ-ಸಿಎಂ: ಧರಣಿ ಕೈಬಿಡಲ್ಲ-ವಿಪಕ್ಷಗಳ ಪಟ್ಟು
ಬೆಂಗಳೂರು, ಮಂಗಳವಾರ, 13 ಜುಲೈ 2010( 16:09 IST )
PTI
ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು ಎಂದು ಮಂಗಳವಾರವೂ ಕೂಡ ವಿಧಾನಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಟ್ಟು ಹಿಡಿದ ಪರಿಣಾಮ, ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಕಲಾಪವನ್ನು ಬುಧವಾರಕ್ಕೆ ಮುಂದೂಡಿದ್ದಾರೆ.
ಸೋಮವಾರದಿಂದ ಕಲಾಪದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಹಠ ತೊಟ್ಟಿರುವ ಕಾಂಗ್ರೆಸ್, ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿ, ವಿಧಾನಸೌಧದಲ್ಲೇ ಠಿಕಾಣಿ ಹೂಡಿದ್ದರು. ಅಲ್ಲದೇ ಇಂದು ಬೆಳಿಗ್ಗೆ ಕೂಡ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ಮುಂದುವರಿಸಿದ ಪರಿಣಾಮ ಸಭಾಧ್ಯಕ್ಷರು ಅನಿವಾರ್ಯವಾಗಿ ಕಲಾಪವನ್ನು ನಾಳೆಗೆ ಮುಂದೂಡಿದರು.
ಕಲಾಪ ಆರಂಭಕ್ಕೂ ಮುನ್ನ ಸದನದೊಳಗೆ ಠಿಕಾಣಿ ಹೂಡಿದ್ದ ಕಾಂಗ್ರೆಸ್, ಜೆಡಿಎಸ್ ಮುಖಂಡರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಮನವೊಲಿಸುವ ಯತ್ನ ನಡೆಸಿದರಾದರೂ ಅದು ಯಾವುದೇ ಪ್ರಯೋಜನ ನೀಡಿಲ್ಲ. ಆದರೆ ಮುಖ್ಯಮಂತ್ರಿಗಳು ನಮ್ಮ ಬಳಿ ಬಂದು ಯಾವುದೇ ವಿಷಯ ಚರ್ಚಿಸಿಲ್ಲ, ಕೇವಲ ಕುಶಲೋಪರಿ ವಿಚಾರಿಸಿ ಹೋಗಿದ್ದಾರೆ ಎಂದು ಜೆಡಿಎಸ್ ಮುಖಂಡ ನಾಣಯ್ಯ ತಿಳಿಸಿದ್ದಾರೆ.
ಸಿಬಿಐಗೆ ವಹಿಸುವ ಪ್ರಶ್ನೆಯೇ ಇಲ್ಲ-ಯಡಿಯೂರಪ್ಪ: ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ವಹಿಸುವವರೆಗೆ ಧರಣಿ ಕೈಬಿಡಲ್ಲ ಎಂದು ವಿಪಕ್ಷಗಳು ಪಟ್ಟು ಹಿಡಿದು ಕುಳಿತಿದ್ದರೆ. ಮತ್ತೊಂದೆಡೆ ಅಕ್ರಮ ಗಣಿಗಾರಿಕೆಯನ್ನು ಯಾವುದೇ ಕಾರಣಕ್ಕೂ ಸಿಬಿಐಗೆ ವಹಿಸೋ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಗಟ್ಟಿ ನಿಲುವು ತಳೆದಿದ್ದಾರೆ.
ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ಕೈಗೊಳ್ಳಲು ಲೋಕಾಯುಕ್ತರಿಗೆ ಸೂಚಿಸಲಾಗಿದೆ. ಬಳಿಕ ಲೋಕಾಯುಕ್ತರು ನೀಡಿದ ವರದಿ ಆಧಾರದ ಮೇಲೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಅಲ್ಲದೇ, ವಿಪಕ್ಷ ಮುಖಂಡರು ಧರಣಿ ಕೈಬಿಟ್ಟು ಕಲಾಪಕ್ಕೆ ಹಾಜರಾಗಬೇಕೆಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡರು. ಕೇವಲ ಒಂದೇ ವಿಚಾರಕ್ಕೆ ವಿಪಕ್ಷಗಳು ಈ ರೀತಿಯಾಗಿ ಧರಣಿ ಮುಂದುವರಿಸುವುದು ಸರಿಯಲ್ಲ ಎಂದರು.
ಸಿಬಿಐಗೆ ವಹಿಸೋವರೆಗೆ ಧರಣಿ ಮುಂದುವರಿಕೆ-ಸಿದ್ದರಾಮಯ್ಯ: ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಶತಮಾನದ ಬಹುದೊಡ್ಡ ಹಗರಣವಾಗಿದೆ. ಹಾಗಾಗಿ ಸಿಬಿಐ ತನಿಖೆಗೆ ಒಪ್ಪಿಸಲೇಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣ ಸಿಬಿಐಗೆ ಒಪ್ಪಿಸುವವರೆಗೆ ಧರಣಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ಆದರೆ ವಿಧಾನಮಂಡಲದ ಅಧಿವೇಶನದಲ್ಲಿ ಬೇರೆ ವಿಷಯ ನಗಣ್ಯ ಅಂತ ಹೇಳಲ್ಲ. ಅವೆಲ್ಲಕ್ಕಿಂತ 20ಸಾವಿರ ಕೋಟಿ ಮೊತ್ತದ ಹಗರಣ ಪ್ರಮುಖವಾದದ್ದು, ಅದನ್ನು ಬಿಟ್ಟು ಬಿಡಲು ಸಾಧ್ಯವಿಲ್ಲ ಎಂದರು.
ಸಿಬಿಐಗೆ ವಹಿಸಲು ಸಿಎಂಗೆ ಭಯ-ರೇವಣ್ಣ: ಅಕ್ರಮ ಗಣಿಗಾರಿಕೆಯಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿರುವುದರಿಂದ ಸಿಬಿಐಗೆ ವಹಿಸಲು ಹಿಂದೇಟು ಹಾಕುತ್ತಿರುವುದಾಗಿ ಜೆಡಿಎಲ್‌ಪಿ ಮುಖಂಡ ಎಚ್.ಡಿ.ರೇವಣ್ಣ ದೂರಿದ್ದಾರೆ. ಏನೇ ಆಗಲಿ, ಸದನದಿಂದ ನಮ್ಮನ್ನು ಎತ್ತಿ ಹೊರಗೆ ಹಾಕಲಿ, ಬಿಡಲಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಸದನದೊಳಗೆ ಗಾನ-ಬಜಾನಾ: ಇಂದೂ ಕೂಡ ಕಲಾಪ ಮುಂದುವರಿಕೆ ನಂತರ ವಿಧಾನಸಭೆಯಲ್ಲೇ ಕಾಂಗ್ರೆಸ್, ಜೆಡಿಎಸ್ ಶಾಸಕರು ಧರಣಿ ಮುಂದುವರಿಸಿದರು. ಈ ಸಂದರ್ಭದಲ್ಲಿ ಶಾಸಕ ಪುಟ್ಟರಾಜು ಅವರು ಜಾನಪದ ಗೀತೆ ಹಾಡುತ್ತಿದ್ದರೆ, ಕಾಂಗ್ರೆಸ್‌ನ ಸಿದ್ದರಾಮಯ್ಯ ಕೈಚಪ್ಪಾಳೆ ತಟ್ಟಿ ಸಾಥ್ ನೀಡಿದರೆ, ವಂಶಪಾರಂಪರ್ಯ ಎಂಬಂತೆ ಜೆಡಿಎಲ್‌ಪಿ ಮುಖಂಡ ಎಚ್.ಡಿ.ರೇವಣ್ಣ ಕುಳಿತಲ್ಲೇ ನಿದ್ದೆಗೆ ಶರಣಾಗಿದ್ದರು. ಅಲ್ಲದೇ ಮಾಜಿ ಶಾಸಕ ಅನ್ನದಾನಿ ಕೂಡ ಜಾನಪದ ಗೀತೆ ಹಾಡಿದರು. ಅಂತೂ ಇದು ಸದನವೋ....ಸಂಗೀತ ಕಚೇರಿಯೋ ಎಂಬ ಕುತೂಹಲ ಜನರದ್ದು!