ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗವರ್ನರ್ ವಿರುದ್ಧ ಕಾನೂನು ಕ್ರಮ: ರೆಡ್ಡಿ ಬ್ರದರ್ಸ್ ಬೆದರಿಕೆ (HR Bharadwaj | illegal mining | Janardan Reddy | Karnataka | Congress)
ಗವರ್ನರ್ ವಿರುದ್ಧ ಕಾನೂನು ಕ್ರಮ: ರೆಡ್ಡಿ ಬ್ರದರ್ಸ್ ಬೆದರಿಕೆ
ಬೆಂಗಳೂರು, ಬುಧವಾರ, 14 ಜುಲೈ 2010( 09:30 IST )
ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ವಿರುದ್ಧ ಅಗತ್ಯ ಬಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಅವರು ಮಂಗಳವಾರ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ನಿಮ್ಮ ಇಬ್ಬರು ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯಪಾಲ ಭಾರದ್ವಾಜ್ ಅವರು ಹೇಳಿರುವುದರ ಬಗ್ಗೆ ಕರುಣಾಕರ ರೆಡ್ಡಿಯನ್ನು ಸುದ್ದಿಗಾರರು ಪ್ರಶ್ನಿಸಿದಾಗ, ಅಗತ್ಯ ಬಿದ್ದರೆ ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡಿರುವ ರಾಜ್ಯಪಾಲರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಮಂಗಳವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಪಾಲರು, ರೆಡ್ಡಿ ಬ್ರದರ್ಸ್ ಹೆಸರು ಪ್ರಸ್ತಾಪಿಸದೇ, ನಿಮ್ಮ ಇಬ್ಬರು ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿಗಳಿಗೆ ಸೂಚಿಸಿದ್ದರು. ರಾಜ್ಯಪಾಲರು ತಮ್ಮ ಅಧಿಕಾರ ಚೌಕಟ್ಟಿನೊಳಗೆ ಕೆಲಸ ನಿರ್ವಹಿಸುತ್ತಿದ್ದಾರೆಯೇ ಅಥವಾ ಇಲ್ಲ ಎಂಬುದು ಜನತೆಗೆ ಗೊತ್ತು ಎಂದು ರೆಡ್ಡಿ ಕಿಡಿಕಾರಿದರು.
ಅಲ್ಲದೇ ಈ ಬಗ್ಗೆ ಜನಾರ್ದನ ರೆಡ್ಡಿ ಕೂಡ ಧ್ವನಿಗೂಡಿಸಿದ್ದು, ನಮ್ಮ ವಿರುದ್ಧವಾಗಿ ರಾಜ್ಯಪಾಲರು ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಏನು ಹೇಳಿದ್ದಾರೆಂಬುದನ್ನು ಖಚಿತಪಡಿಸಿಕೊಂಡು, ನಂತರ ಕಾನೂನು ಕ್ರಮ ಜರುಗಿಸಲು ಮುಂದಾಗುವುದಾಗಿ ಎಚ್ಚರಿಸಿದ್ದಾರೆ.