ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ವಿರೋಧ ಪಕ್ಷಗಳು ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಸಾಥ್ ನೀಡಿದ್ದು, ಆಡಳಿತಾರೂಢ ಬಿಜೆಪಿಗೆ ಧೈರ್ಯವಿದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಸಂಪತ್ತಿನ ಹಗಲು ದರೋಡೆ ನಡೆಯುತ್ತಿದೆ. ಇದಕ್ಕೆ ಅಂತ್ಯ ಹಾಡಬೇಕಿದೆ. ಅಕ್ರಮ ಗಣಿಗಾರಿಕೆ ಮೂಲಕ ಅದಿರನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಪ್ರಕರಣವಾಗಿದ್ದರಿಂದ ಸಿಬಿಐ ತನಿಖೆ ನಡೆಯುವುದು ಅವಶ್ಯ ಎಂದರು.
ಮುಖ್ಯಮಂತ್ರಿಗಳು ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಎಲ್ಲಾ ಪಕ್ಷಗಳ ನಾಯಕರೂ ಇರುವುದರಿಂದ ಮತ್ತು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವವರೆಗೆ ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣಗಳೆಲ್ಲವನ್ನೂ ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಸವಾಲು ಹಾಕಿದರು.
ಅಲ್ಲದೇ ಚುನಾವಣೆ ಎದುರಿಸಲು ಸಿದ್ದ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದಾರೆ. ಅದಕ್ಕೆ ಏಕೆ ತಡ ಮಾಡುತ್ತಾರೆ. ಧೈರ್ಯವಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜನೆ ಮಾಡುವ ನಿರ್ಣಯ ಮಾಡಿ ರಾಜ್ಯಪಾಲರಿಗೆ ಶಿಫಾರಸು ಕಳುಹಿಸಲಿ. ನಂತರ ಚುನಾವಣೆ ಎದುರಿಸಲಿ ಎಂದರು.