ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ವಿಪಕ್ಷಗಳು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ ಸಂದರ್ಭದಲ್ಲಿ ಮಾಂಸಹಾರ ಸೇವಿಸುವ ಮೂಲಕ ಸದನದ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶವ್ಯಕ್ತಪಡಿಸಿದ್ದಾರೆ.
ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ತನ್ನದೇ ಆದ ಪಾವಿತ್ರ್ಯ ಹೊಂದಿದೆ. ಸುಮಾರು 60ವರ್ಷಗಳ ಇತಿಹಾಸ ಹೊಂದಿರುವ ವಿಧಾನಸಭೆಯಲ್ಲಿ ಮಾಂಸಾಹಾರ ಸೇವಿಸುವ ಮೂಲಕ ಅಪವಿತ್ರಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ನಡವಳಿಕೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದರು.
ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವವರೆಗೆ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ವಿಧಾನಸೌಧದಲ್ಲೇ ಠಿಕಾಣಿ ಹೂಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರು, ಅಲ್ಲೇ ನಿದ್ದೆ, ಹರಟೆ, ಊಟೋಪಚಾರ, ಬೆಳಿಗ್ಗೆ ತಿಂಡಿ, ಜಾಗಿಂಗ್, ವಾಕಿಂಗ್ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಮಂಗಳವಾರ ಕೂಡ ಕಲಾಪ ಮುಂದೂಡಿಕೆ ನಂತರ ವಿಧಾನಸೌಧದಲ್ಲೇ ಠಿಕಾಣಿ ಹೂಡಿದ್ದ ಶಾಸಕರು ಜಾನಪದ ಗೀತೆ, ಹರಟೆಯ ಮೂಲಕ ಪ್ರತಿಭಟನೆ ಮುಂದುವರಿಸಿದ್ದರು.