ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪಟ್ಟು ಬಿಡದ ವಿಪಕ್ಷಗಳು: ಕಲಾಪ ನಾಳೆಗೆ ಮುಂದೂಡಿಕೆ (Congress | JDS | Yeddyurappa | BJP | CBI | Vidhana sowdha)
Bookmark and Share Feedback Print
 
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಬುಧವಾರ ಕೂಡ ಮುಂದುವರಿಸಿದ ಹಿನ್ನೆಲೆಯಲ್ಲಿ ಉಭಯ ಸದನಗಳ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಅಕ್ರಮ ಗಣಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲೇಬೇಕೆಂದು ಪಟ್ಟು ಹಿಡಿದಿರುವ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಕಳೆದ ಎರಡು ದಿನಗಳಿಂದ ವಿಧಾನಸೌಧದಲ್ಲೇ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಧರಣಿ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಬೆಳಿಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಕೋಲಾಹಲವೆಬ್ಬಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಸದನದ ಕಲಾಪವನ್ನು ನಾಳೆಗೆ ಮುಂದೂಡಿದರು.

ಏತನ್ಮಧ್ಯೆ, ವಿಧಾನಪರಿಷತ್‌ನಲ್ಲಿಯೂ ಕಲಾಪ ಆರಂಭವಾಗುತ್ತಿದ್ದಂತೆಯೇ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಅಕ್ರಮ ಗಣಿಗಾರಿಕೆ ವಿಷಯ ಕುರಿತು ಗದ್ದಲ ಎಬ್ಬಿಸಿದಾಗ, ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಅವರು ಕಲಾಪಕ್ಕೆ ಸಹಕರಿಸುವಂತೆ ಕೋರಿದರು. ಆದರೆ ಕಾಂಗ್ರೆಸ್‌ನ ಮೋಟಮ್ಮ, ಜೆಡಿಎಸ್‌ನ ನಾಣಯ್ಯ, ದತ್ತಾ ಅವರು ಏರು ಧ್ವನಿಯಲ್ಲಿ ಕೋಲಾಹಲವೆಬ್ಬಿಸಿದ ಪರಿಣಾಮ ಕಲಾಪವನ್ನು ನಾಳೆಗೆ ಮುಂದೂಡಿರುವುದಾಗಿ ಸಭಾಧ್ಯಕ್ಷರು ಹೇಳಿದರು.

ಕ್ಷಮೆ ಕೋರಿದ ಸ್ಪೀಕರ್: ಕಲಾಪಕ್ಕೆ ಅವಕಾಶ ಮಾಡಿಕೊಡುವಂತೆ ವಿಧಾನಸಭಾ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಮನವಿ ಮಾಡಿಕೊಂಡರು ಕೂಡ, ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಗದ್ದಲ ಮುಂದುವರಿಸಿದಾಗ, ಆಡಳಿತ ಮತ್ತು ಪ್ರತಿಪಕ್ಷಗಳು ಸಹಕಾರ ನೀಡದ ಹಿನ್ನೆಲೆಯಲ್ಲಿ ಈ ರಾಜ್ಯದ ಜನರ ಕ್ಷಮೆ ಕೋರಿ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ ಎಂದು ಎದ್ದು ಹೋದರು.

ಕಳೆದ ಮೂರು ದಿನಗಳಿಂದ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಸುಗಮವಾಗಿ ಕಲಾಪ ನಡೆಯಲು ಅವಕಾಶ ಮಾಡಿಕೊಡುತ್ತಿಲ್ಲ. ಹಾಗಾಗಿ ಈ ರಾಜ್ಯದ ಜನರ ಕ್ಷಮೆಯನ್ನು ಕೋರಿ ಕಲಾಪ ಮುಂದೂಡುತ್ತಿರುವುದಾಗಿ ಸಭಾಧ್ಯಕ್ಷ ಬೋಪಯ್ಯ ಅವರು ಹೇಳಿದರು.

ಸ್ಪೀಕರ್ ಸಂಧಾನ ವಿಫಲ: ವಿಧಾನಮಂಡಲ ಕಲಾಪದ ಆರಂಭಕ್ಕೂ ಮುನ್ನ, ಕಳೆದ ಎರಡು ದಿನಗಳಿಂದ ವಿಧಾನಸೌಧದಲ್ಲೇ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಇಂದು ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಭೇಟಿಯಾಗಿ ಕುಶಲೋಪರಿ ವಿಚಾರಿಸಿ ಚರ್ಚೆ ನಡೆಸಿದರು. ಅಲ್ಲದೆ, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವಂತೆ ವಿಪಕ್ಷ ನಾಯಕರ ಮನವೊಲಿಕೆಗೆ ಸ್ಪೀಕರ್ ಯತ್ನಿಸಿದರು. ಆದರೆ ಅಕ್ರಮ ಗಣಿಗಾರಿಕೆ ಹಗರಣವನ್ನು ಸಿಬಿಐಗೆ ಒಪ್ಪಿಸುವವರೆಗೆ ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ವಿಪಕ್ಷ ನಾಯಕರು ಪಟ್ಟು ಹಿಡಿದ ಪರಿಣಾಮ ಸ್ಪೀಕರ್ ಸಂಧಾನ ವಿಫಲವಾಯಿತು.
ಸಂಬಂಧಿತ ಮಾಹಿತಿ ಹುಡುಕಿ