ಬೆಳಗಾವಿ ಗಡಿ ವಿವಾದ ಕುರಿತಂತೆ ಗಲಾಟೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಾರ್ಕೆಟ್ ಪೊಲೀಸರು ಎಂಇಎಸ್‌ನ ಮಾಜಿ ಶಾಸಕ ಸೇರಿದಂತೆ ಮೂವರು ಮುಖಂಡರನ್ನು ಬಂಧಿಸಿದ್ದಾರೆ.
ಬಂಧಿತರು ಮಾಜಿ ಶಾಸಕರಾದ ಮನೋಹರ ಕಿಣೇಕರ, ದಿಗಂಬರ ಪಾಟೀಲ ಹಾಗೂ ಮಾಜಿ ಮೇಯರ್ ವಿಜಯ ಮೋರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಂಇಎಸ್ ಮುಖಂಡರಾದ ದೀಪಕ್ ದಳವಿ, ಮನೋಹರ ಕಡೋಲ್ಕರ, ಸಂಭಾಜಿ ಪಾಟೀಲ್, ವಸಂತರಾವ ಪಾಟೀಲ್, ಪ್ರಕಾಶ ಶಿರೋಳಕರ್, ಶಿವಾಜಿ ಸುಂಠಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಅವರನ್ನೂ ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ಗಡಿ ವಿವಾದ ಕುರಿತಂತೆ ರಾಜ್ಯದ ಪರವಾಗಿ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದನ್ನು ಆಕ್ಷೇಪಿಸಿ ಎಂಇಎಸ್ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಏರ್ಪಡಿಸಿತ್ತು. ಈ ವೇಳೆ ಕನ್ನಡ ಧ್ವಜ ಮತ್ತು ಫಲಕಗಳನ್ನು ಕಿತ್ತೆಸೆದು ಕಲ್ಲು ತೂರಾಟ ನಡೆಸಿ ಗಲಾಟೆ ನಡೆಸಿದ್ದರು.
ಆ ನಿಟ್ಟಿನಲ್ಲಿ ಗಲಭೆಯಲ್ಲಿ ಭಾಗಿಯಾಗಿದ್ದಲ್ಲದೇ, ಪ್ರಚೋದನೆ ನೀಡಿದ ಆರೋಪದ ಮೇಲೆ ಈ ಮೂವರು ಎಂಇಎಸ್ ನಾಯಕರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ 12 ಜನರನ್ನು ಬಂಧಿಸಲಾಗಿದೆ. ನಗರದ ಪ್ರಾರ್ಥನಾ ಮಂದಿರ, ಸೂಕ್ಷ್ಮ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು ಭದ್ರತೆಯನ್ನು ಮುಂದುವರಿಸಲಾಗಿದೆ.