ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಬುಧವಾರ ಮತ್ತು ಗುರುವಾರ ಜಿಲ್ಲಾವಾರು ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.
ಅಕ್ರಮ ಗಣಿಗಾರಿಕೆ ಕುರಿತು ಜನರಲ್ಲಿ ಮೊದಲು ಅರಿವು ಮೂಡಿಸುವ ಸಲುವಾಗಿ 14, 15ರಂದು ಪ್ರತಿಭಟನೆ ನಡೆಸಲಾಗುತ್ತಿದೆ. ಜು.21ರಂದು ಹುಬ್ಬಳ್ಳಿಯಲ್ಲಿ ರೈತರ ಸಮಾವೇಶ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಘೋಷಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶದಲ್ಲಿ 15ರಿಂದ 20 ಸಾವಿರ ರೈತರು ಭಾಗವಹಿಸುವರು. ಆ ಸಂದರ್ಭದಲ್ಲಿ ದುಡಿಯುವ ವರ್ಗದವರ ಬದುಕು, ಜನಾಂದೋಲನದ ಮೂಲಕ ರಾಜನೀತಿ, ರಾಜಕೀಯ ಆಂದೋಲನ ಕುರಿತು ಚರ್ಚೆ ನಡೆಸಲಾಗುವುದು ಎಂದರು.
ಗಣಿ ವಿಷಯದಲ್ಲಿ ಎಲ್ಲ ರಾಜಕೀಯ ರಾಜಕೀಯ ಪಕ್ಷಗಳವರು ಭಾಗವಹಿಸುವರು. ಅಕ್ರಮ ಗಣಿಗಾರಿಕೆ ನಿಲ್ಲಿಸಲು ನನ್ನಿಂದ ಸಾಧ್ಯವಾಗದಿದ್ದರೆ ರಾಜೀನಾಮೆಗೂ ಸಿದ್ಧ ಎಂದಿರುವ ಮುಖ್ಯಮಂತ್ರಿಗೆ, ಸಿಬಿಐ ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.