ಪ್ರಿಯಕರನ ಜತೆಗೂಡಿ ಭಾವಿ ಪತಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಶುಭಾ ಶಂಕರನಾರಾಯಣ ಸೇರಿದಂತೆ ನಾಲ್ವರಿಗೆ ನಗರದ 17ನೇ ತ್ವರಿತಗತಿ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷಿ ವಿಧಿಸಿ ತೀರ್ಪು ನೀಡಿದೆ.
ಕೊಲೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಭಾವಿ ಪತಿಯನ್ನು ಕೊಂದ ಶುಭಾ ಹಾಗೂ ಕೊಲೆಗೆ ಸಹಕರಿಸಿದ್ದ ಪ್ರಿಯಕರ ಅರುಣ ವರ್ಮಾ, ವೆಂಕಟೇಶ್, ದಿನೇಶ್ ಕೂಡ ತಪ್ಪಿತಸ್ಥರು ಎಂದು ಮಂಗಳವಾರ ನ್ಯಾಯಾಲಯ ತೀರ್ಪು ನೀಡಿತ್ತು. ಇವರೆಲ್ಲರ ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸುವುದಾಗಿ ಘೋಷಿಸಿದ್ದರು.
ಇಂದು ನಗರದ 17ನೇ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಒಂಟಿಗೋಡಿ ಅವರು, ಶುಭಾ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಅಲ್ಲದೇ ಒಂದನೇ ಆರೋಪಿ ಅರುಣ ವರ್ಮಾಗೆ 50 ಸಾವಿರ ರೂ.ದಂಡ, ವೆಂಕಟೇಶ್‌ಗೆ ಒಂದು ಲಕ್ಷ ರೂಪಾಯಿ, ದಿನೇಶ್‌ಗೆ 50 ಸಾವಿರ ಹಾಗೂ ನಾಲ್ಕನೇ ಆರೋಪಿ ಶುಭಾಗೆ 75 ಸಾವಿರ ರೂಪಾಯಿ ದಂಡ ವಿಧಿಸಿದರು.
2003ರ ನವೆಂಬರ್ 30ರಂದು ಇಂಟೆಲ್ ಉದ್ಯೋಗಿಯಾಗಿದ್ದ ಗಿರೀಶ್ ಅವರ ಜೊತೆ ಶುಭಾಳ ವಿವಾಹ ನಿಶ್ಚಯವಾಗಿತ್ತು. ಆದರೆ ಶುಭಾ, ತನ್ನದೇ ಕಾಲೇಜಿನಲ್ಲಿ ಕಲಿಯುತ್ತಿದ್ದ ಅರುಣ್ ವರ್ಮಾ ಎಂಬಾತನ ಜೊತೆ ಪ್ರೇಮಾಂಕುರವಾಗಿತ್ತು. ಆದರೆ ಸುಂದರಿ ಹಂತಕಿ ವಿವಾಹ ನಿಶ್ಚಯವಾಗುವವರೆಗೂ ಬಾಯಿ ಬಿಡದ ಈಕೆ ಕೊಲೆ ಸಂಚು ರೂಪಿಸಿದ್ದಳು.
ಅದಕ್ಕೆ ಪೂರ್ಣ ಪ್ರಮಾಣದ ತಯಾರಿ ನಡೆಸಿಕೊಂಡಿದ್ದ ಶುಭಾ, ಡಿಸೆಂಬರ್ 3ರಂದು ನಗರದ ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ಹೋ ಟೆಲ್ ಒಂದಕ್ಕೆ ಗಿರೀಶ್ ಜೊತೆ ಬೈಕ್‌ನಲ್ಲಿ ಊಟಕ್ಕೆ ಹೋಗಿದ್ದ ಶುಭಾ, ಊಟ ಮುಗಿಸಿ ಮನೆಗೆ ವಾಪಸಾಗುವ ವೇಳೆ ಇಂದಿರಾನಗರ-ಕೋರಮಂಗಲ ರಸ್ತೆ ಸಮೀಪ ತಾನು ವಿಮಾನ ಇಳಿಯುವ ಮತ್ತು ಹಾರುವ ದೃಶ್ಯ ನೋಡಬೇಕೆಂದು ತಿಳಿಸಿದ್ದಳು. ಇದನ್ನು ನಂಬಿದ ಗಿರೀಶ್ ಬೈಕ್ ನಿಲ್ಲಿಸಿದ್ದ. ಮೊದಲೇ ಸಂಚು ರೂಪಿಸಿದಂತೆ ಅರುಣ್ ವರ್ಮಾ ಹಾಗೂ ಇತರರು ಗಿರೀಶ್ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದರು. ನಂತರ ಗಿರೀಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಪ್ರಕರಣದ ಬಗ್ಗೆ ವಿವೇಕನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 2004ರ ಜನವರಿ 28ರಂದು ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ನಂತರ ವೆಂಕಟೇಶ್ ಹೊರತುಪಡಿಸಿ ಮೂವರಿಗೆ ಜಾಮೀನು ದೊರೆತಿತ್ತು. ಇದೀಗ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮೇಲ್ಮನವಿ ಸಲ್ಲಿಸುವ ಅವಕಾಶ ಇರುವುದಾಗಿ ಶುಭಾ ಪರ ವಕೀಲರು ತಿಳಿಸಿದ್ದಾರೆ.