ಅಕ್ರಮ ಗಣಿಗಾರಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೇ ಭಾಗಿಯಾಗಿದ್ದಾರೆ. ಅದರಿಂದ ಬಚಾವ್ ಆಗಲು ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವುದೇ ಕಾರಣಕ್ಕೂ ಇದನ್ನು ಸಿಬಿಐಗೆ ಒಪ್ಪಿಸುವುದಿಲ್ಲ. ಬದಲಾಗಿ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಟ್ಟು ತನಿಖೆ ಮಾಡಿಸುತ್ತೇನೆ ಎಂದರು.
ಕಾಂಗ್ರೆಸ್‌ನವರ ನಿಜಬಣ್ಣ ಏನು ಎಂಬುದನ್ನು ಬಯಲಿಗೆ ಎಳೆಯುತ್ತೇನೆ ಎಂದು ಕಿಡಿಕಾರಿದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ಭೇಟಿಯಾಗಿರುವುದು ಒಳ್ಳೆಯ ಬೆಳವಣಿಗೆ. ಇದನ್ನು ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್‌ನಲ್ಲಿ ಬೇಜಾರಾಗಿರುವ ಸಿದ್ದರಾಮಯ್ಯ ಜೆಡಿಎಸ್‌ಗೆ ಹೋಗಬಹುದು ಎಂದು ಕಾಣುತ್ತದೆ. ಏನೇ ಆಗಲಿ ಇದು ಒಳ್ಳೆಯ ಬೆಳವಣಿಗೆ ಎಂದು ವ್ಯಂಗ್ಯವಾಡಿದರು.
ಅಕ್ರಮ ಗಣಿಗಾರಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್:ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಮಾಜಿ ಸಂಸದ ಆರ್.ಎಲ್.ಜಾಲಪ್ಪ, ಮಂಜುನಾಥ್ ಕುನ್ನೂರು, ರಾಜ್ಯಸಭಾ ಸದಸ್ಯ ಅನಿಲ್ ಲಾಡ್, ಶಾಸಕ ಸಿ.ಬಿ.ಸುರೇಶ್ ಬಾಬು, ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಪುತ್ರ ಕೆ.ರಾಜೀವ್, ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಪತ್ನಿ ಭಾರತಿದೇವಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಲ್ಲಿ ಸೇರಿದ್ದಾರೆ ಎಂದು ಸೋಮವಾರ ಸಿಎಂ ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷಗಳ ಬೇಡಿಕೆಯಿಂದ ಆಕ್ರೋಶಗೊಂಡು ಈ ರೀತಿ ಮಾಹಿತಿ ಬಹಿರಂಗ ಪಡಿಸಿದ್ದರು.
ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಂಸದ ಜಾಲಪ್ಪ, ಯಡಿಯೂರಪ್ಪ ಅವರು ನನ್ನ ಹೆಸರನ್ನು ಯಾಕೆ ಪ್ರಸ್ತಾಪಿಸಿದರೋ ಗೊತ್ತಿಲ್ಲ. ನಾನು ಈವರೆಗೂ ಯಾವುದೇ ಗಣಿಗಾರಿಕೆಯಲ್ಲಿ ತೊಡಗಿಲ್ಲ. ಅನಾವಶ್ಯಕವಾಗಿ ನನ್ನ ಹೆಸರನ್ನು ಎಳೆದುತಂದಿದ್ದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಅದೇ ರೀತಿ, ಅಕ್ರಮ ಗಣಿಗಾರಿಕೆ ಕುರಿತಂತೆ ಮುಖ್ಯಮಂತ್ರಿಗಳು ಹೇಳಿರುವ ಪಟ್ಟಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರ ಹೆಸರನ್ನು ಮಾತ್ರ ಪ್ರಸ್ತಾಪಿಸಿದ್ದಾರೆ. ಆದರೆ ಬಿಜೆಪಿಯವರ ಹೆಸರೇ ಇಲ್ಲವಲ್ಲಾ ಎಂದು ಪ್ರಶ್ನಿಸಿ, ಬಿಜೆಪಿಯಲ್ಲಿ ಯಾರೂ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಲ್ಲವೇ ಎಂದು ತಿರುಗೇಟು ನೀಡಿದ್ದರು.