ಬಳ್ಳಾರಿಗೆ ಬನ್ನಿ ಎಂದು ರೆಡ್ಡಿ ಬ್ರದರ್ಸ್ ಸವಾಲಿಗೆ ಪ್ರತಿಯಾಗಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವುದಾಗಿ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದ ಬೆನ್ನಿಗೆ, ತಾವು ಕೂಡ ಬಳ್ಳಾರಿಯಿಂದ ಮೈಸೂರಿಗೆ ಪಾದಯಾತ್ರೆ ಮಾಡುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಸವಾಲು ಹಾಕಿದ್ದಾರೆ.
ಬಳ್ಳಾರಿ ಸಹೋದರರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆಂದು ಪ್ರತಿಪಕ್ಷಗಳು ಅನಾವಶ್ಯಕವಾಗಿ ಟೀಕಿಸುತ್ತಿರುವುದಾಗಿ ಆರೋಪಿಸಿದ ಅವರು, ಅಕ್ರಮ ಗಣಿಗಾರಿಕೆಯನ್ನು ಸಾಬೀತುಪಡಿಸಿದ್ರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೂಡುವುದಾಗಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಖಾರವಾಗಿ ಪ್ರತಿಕ್ರಿಯಿಸಿದರು.
ಬಳ್ಳಾರಿಯ ದುರ್ಗಮ್ಮ ದೇವಾಲಯದಿಂದ ಆರಂಭಗೊಳ್ಳಲಿರುವ ಈ ಪಾದಯಾತ್ರೆ ಸಿದ್ದರಾಮಯ್ಯ ಅವರ ಸ್ವಕ್ಷೇತ್ರವಾದ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ಬಳಿ ಸಮಾಪ್ತಿಗೊಳ್ಳಲಿದೆ. ನಂತರ ವರುಣಾ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.
ಇದು ಪ್ರಜಾಪ್ರಭುತ್ವ ಪ್ರತಿಭಟನೆ, ಪಾದಯಾತ್ರೆ ನಡೆಸಲು ಎಲ್ಲರಿಗೂ ಹಕ್ಕಿದೆ. ಕೇವಲ ಕಾಂಗ್ರೆಸ್ ಮುಖಂಡರು ಮಾತ್ರ ಪಾದಯಾತ್ರೆ ನಡೆಸಲು ಸವಾಲು ಹಾಕುವ ಅಗತ್ಯವಿಲ್ಲ. ನಾವೂ ಕೂಡ ತಯಾರಾಗಿದ್ದೇವೆ ಎಂದು ಶ್ರೀರಾಮುಲು ತಿರುಗೇಟು ನೀಡಿದರು.
ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯನವರಿಗೆ ಏನು ಮಾತನಾಡುತ್ತಿದ್ದೇನೆ ಎಂಬ ಅರಿವು ಇಲ್ಲ. ಅನಾವಶ್ಯಕವಾಗಿ ನಮ್ಮನ್ನು(ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು) ಟಾರ್ಗೆಟ್ ಮಾಡಿ ಆರೋಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.