ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡುವುದಾಗಿ ಕಾಂಗ್ರೆಸ್ ಮುಖಂಡರು ಸವಾಲು ಹಾಕಿದ ಬೆನ್ನಲ್ಲೇ, ಅದಕ್ಕೆ ಪ್ರತಿಯಾಗಿ ರೆಡ್ಡಿ ಸಹೋದರರು ಸೆಡ್ಡು ಹೊಡೆದಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿ ಮೊದಲ ಹಂತದ ಪಾದಯಾತ್ರೆ ನಡೆಸುವುದಾಗಿ ಘೋಷಿಸುವ ಮೂಲಕ ಬೃಹತ್ ಶಕ್ತಿ ಪ್ರದರ್ಶನಕ್ಕೆ ರೆಡ್ಡಿ ಬ್ರದರ್ಸ್ ಮುಂದಾಗಿದ್ದಾರೆ.
ವಿಧಾನಮಂಡಲದ ಉಭಯ ಸದನಗಳಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ನಮ್ಮನ್ನು ಟಾರ್ಗೆಟ್ ಮಾಡಿದ್ದು, ಆ ನಿಟ್ಟಿನಲ್ಲಿ ಜನರ ಮುಂದೆ ವಾಸ್ತವಾಂಶ ಬಿಚ್ಚಿಡುವುದಾಗಿ ರೆಡ್ಡಿ ಬ್ರದರ್ಸ್ ಮೂಲಗಳು ತಿಳಿಸಿವೆ,
ಪಾದಯಾತ್ರೆಯಲ್ಲಿ ರೆಡ್ಡಿ ಸಹೋದರರು ಮತ್ತು ಬೆಂಬಲಿಗರು ಪಾಲ್ಗೊಳ್ಳಲಿದ್ದು, ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ನೇತ್ವದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದೆ.
ಕಾಂಗ್ರೆಸ್‌ನ ತಂತ್ರಕ್ಕೆ ಪ್ರತಿತಂತ್ರ ರೂಪಿಸಿರುವ ರೆಡ್ಡಿ ಬ್ರದರ್ಸ್, ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಬಳ್ಳಾರಿಯಿಂದ ಮೈಸೂರಿಗೆ, ಶಾಸಕ ಆನಂದ್ ಸಿಂಗ್, ಕೂಡ್ಲಗಿ ಶಾಸಕ ನಾಗೇಂದ್ರ, ಕಂಪ್ಲಿ ಶಾಸಕ ಸುರೇಶ್ ಬಾಬು, ಹೂವಿನ ಹಡಗಲಿ ಶಾಸಕ ಚಂದ್ರ ನಾಯಕ್, ರಾಯಚೂರು ಸಂಸದ ಸಣ್ಣ ಫಕೀರಪ್ಪ, ಹಗರಿ ಬೊಮ್ಮನಹಳ್ಳಿ ಶಾಸಕ ನೇಮಿರಾಜ್, ಸಚಿವ ಕರುಣಾಕರ ರೆಡ್ಡಿ ನೇತೃತ್ವದಲ್ಲಿ ದಾವಣಗೆರೆ, ಚಿತ್ರದುರ್ಗ, ಶಾಸಕ ಸೋಮಶೇಖರ ರೆಡ್ಡಿ ಬಳ್ಳಾರಿ ವ್ಯಾಪ್ತಿ, ಸಂಸದೆ ಜೆ.ಶಾಂತಾ ಸಂಡೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸುವ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಅಷ್ಟೇ ಅಲ್ಲ ಎರಡನೇ ಹಂತದಲ್ಲಿ ಉಳಿದ ಜಿಲ್ಲೆಗಳಲ್ಲಿ ಪಾದಯಾತ್ರೆ ಮಾಡುವ ಬಗ್ಗೆ ಪಕ್ಷದ ಮುಖಂಡರದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದಾಗಿ ರೆಡ್ಡಿ ಸಹೋದರರು ಹೇಳಿದ್ದಾರೆ. ಪಾದಯಾತ್ರೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಗಮನಕ್ಕೆ ತರಲಾಗಿದೆ ಎಂದರು.
ಪಾದಯಾತ್ರೆ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ-ಸಿಎಂ:ಕಾಂಗ್ರೆಸ್ ಮುಖಂಡರ ಸವಾಲಿಗೆ ಪ್ರತಿಸವಾಲು ಹಾಕಿರುವ ರೆಡ್ಡಿ ಸಹೋದರರ ಪಾದಯಾತ್ರೆ ಕುರಿತಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆ ಬಗ್ಗೆ ನಾನು ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಪಾದಯಾತ್ರೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.