ವಿಧಾನಮಂಡಲದಲ್ಲಿ ನಮ್ಮನ್ನಾಳುವ ಶಾಸಕ ಮಹೋದಯರುಗಳು ತೋಳೇರಿಸಿ ಪರಸ್ಪರ ಕದನಕ್ಕೆ ಇಳಿಯುವ ಲಕ್ಷಣಗಳು ಕಂಡುಬಂದ ಬಳಿಕ 'ಬೆದರಿಕೆ ಇದೆ' ಎಂಬ ಕಾರಣವೊಡ್ಡಿ ಪ್ರತಿಪಕ್ಷಗಳು ಹೆಲ್ಮೆಟ್ ಧರಿಸಿ ಸದನಕ್ಕೆ ಆಗಮಿಸಿದ್ದಕ್ಕೆ ಪ್ರತಿಯಾಗಿ, ಬಿಜೆಪಿ ಸದಸ್ಯರೂ ಸುಮ್ಮನುಳಿದಿಲ್ಲ. ಪ್ರತಿತಂತ್ರದ ರೂಪದಲ್ಲಿ ಅವರು ಶುಕ್ರವಾರ, ಕಾಂಗ್ರೆಸ್ ವಿರುದ್ಧ ಟೀಕಾತ್ಮಕ ಬರಹಗಳುಳ್ಳ ಟಿ-ಶರ್ಟ್ ಧರಿಸಿ ಸದನಕ್ಕೆ ಆಗಮಿಸಿದರು.
ಅಕ್ರಮ ಗಣಿಗಾರಿಕೆ ವಿಷಯವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ವಿಧಾನಮಂಡಲದ ಉಭಯ ಸದನಗಳಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ 5ನೇ ದಿನಕ್ಕೆ ಕಾಲಿಟ್ಟಿರುವಂತೆಯೇ, ಶುಕ್ರವಾರ ಹೊಸ ವಿದ್ಯಮಾನಕ್ಕೆ ವಿಧಾನಸೌಧ ಸಾಕ್ಷಿಯಾಯಿತು.
ಕ್ಷೀರ ನಿಗಮ ಅಧ್ಯಕ್ಷ, ಶಾಸಕ ಸೋಮಶೇಖರ ರೆಡ್ಡಿ ಮತ್ತು ಇತರ ಕೆಲವು ಬಿಜೆಪಿ ಶಾಸಕರು ಧರಿಸಿಕೊಂಡಿದ್ದ ಟಿ-ಶರ್ಟ್‌ನಲ್ಲಿ "ನೆರೆ ಸಂತ್ರಸ್ತರ ಪರಿಹಾರ ಹಣ ನುಂಗಿದ ಪಕ್ಷಕ್ಕೆ ನ್ಯಾಯ ಬೇಕೇ?", "ಸ್ವಿಸ್ ಬ್ಯಾಂಕ್ ಹಣ ವಾಪಸ್ ತರುತ್ತೇನೆಂದ ಯುಪಿಎ ಸರಕಾರದ ಭರವಸೆ ಏನಾಯಿತು" ಹಾಗೂ "ಕಾಂಗ್ರೆಸಿಗರ ದಬ್ಬಾಳಿಕೆಗೆ ಮಿತಿ ಇರಲಿ" ಎಂಬಂಥಾ ಒಕ್ಕಣೆಗಳಿದ್ದವು.
ಮತ್ತೆ 10 ವಿಧೇಯಕಗಳ ಅಂಗೀಕಾರ 2010-110 ಧನವಿನಿಯೋಗ ವಿಧೇಯಕ, ಲೋಕಾಯುಕ್ತ ಕಾಯಿದೆ ತಿದ್ದುಪಡಿ ವಿಧೇಯಕ ಸಹಿತ 10 ವಿಧೇಯಕಗಳು ಸದನದಲ್ಲಿ ಅಂಗೀಕಾರಗೊಂಡವು. ಸಭಾಧ್ಯಕ್ಷ ಮನವಿ ಮಾಡಿದರೂ, ಪ್ರತಿಪಕ್ಷಗಳ ಗದ್ದಲ, ಧಿಕ್ಕಾರ, ಘೋಷಣೆ, ಕೂಗಾಟ ಹೆಚ್ಚಾದಾಗ, ಸಭಾಧ್ಯಕ್ಷರ ಸೂಚನೆಯಂತೆ ವಿಧೇಯಕಗಳನ್ನು ಮಂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಅದಕ್ಕೆ ಸದನದ ಅಂಗೀಕಾರ ಪಡೆದುಕೊಂಡರು.
ಆಕ್ರೋಶಗೊಂಡ ಪ್ರತಿಪಕ್ಷಗಳು ಗುರುವಾರದಂತೆಯೇ ಶುಕ್ರವಾರವೂ ಸದನದೊಳಗೆಯೇ ಈ ವಿಧೇಯಕಗಳ ಪ್ರತಿಗಳನ್ನು ಹರಿದು ಹಾಕಿದರು.