'ಇಂತಹ ಕೆಟ್ಟ ತಾಯಿ ಜಗತ್ತಿನಲ್ಲಿ ಇದ್ದರೆ ದೇವರೇ ಗತಿ...ಇದು ಕೆಟ್ಟ ತಾಯಿ...ಕೆಟ್ಟ ಮಕ್ಕಳು...ಹೀಗೆಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಮತ್ತು ರೆಡ್ಡಿ ಬ್ರದರ್ಸ್ ವಿರುದ್ಧ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದ ಪರಿ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣ ಕುರಿತಂತೆ ಮಾತನಾಡಿದ ಅವರು, ತಪ್ಪು ಮಾಡುವ ಮಕ್ಕಳನ್ನು ತಿದ್ದಬೇಕು. ಆದರೆ ಈ ತಾಯಿ (ಸುಷ್ಮಾ) ಮಕ್ಕಳ (ರೆಡ್ಡಿ ಬ್ರದರ್ಸ್) ತಪ್ಪನ್ನು ಸರಿಪಡಿಸದೇ ಬೆಳೆಯಲು ಬಿಟ್ಟಿದ್ದಾರೆ. ಹಾಗಾಗಿ ಇದು ಕೆಟ್ಟ ತಾಯಿಗೆ, ಕೆಟ್ಟ ಮಕ್ಕಳು ಎಂದು ಬಣ್ಣಿಸಿದರು.
ಇಂತಹ ಕೆಟ್ಟ ತಾಯಿ ಮಕ್ಕಳು ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿಯೇ ಇಲ್ಲ. ಅಲ್ಲದೇ ಇಂತಹ ತಾಯಿ ಜಗತ್ತಿನಲ್ಲಿ ಇದ್ದರೆ ದೇವರೇ ಗತಿ ಎಂದು ವ್ಯಂಗ್ಯವಾಡಿದರು. ಅಷ್ಟೇ ಅಲ್ಲ ಬಿಜೆಪಿ ರಾಷ್ಟ್ರೀಯ ಪಕ್ಷವೇ ಎಂಬ ಬಗ್ಗೆ ಸಂಶಯ ಮೂಡುತ್ತದೆ ಎಂದರು.
ಗಣಿ ಹಗರಣ ರಾಜ್ಯ ಸರಕಾರಕ್ಕೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ರಾಜ್ಯದ ಬಗ್ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಕ್ರಮ ಶ್ಲಾಘನೀಯವಾಗಿದೆ ಎಂದು ಸಮರ್ಥನೆ ನೀಡಿದರು.
ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ಗಣಿಗಾರಿಕೆ ಹಗರಣ ನಡೆದಿದೆ ಎಂದು ಲೋಕಾಯುಕ್ತ ವರದಿ, ವಿಪಕ್ಷಗಳು ಹೋರಾಟ ನಡೆಸುತ್ತಿದ್ದರು ಕೂಡ, ಮುಖ್ಯಮಂತ್ರಿಯಾಗಲಿ, ಬಿಜೆಪಿಯ ವರಿಷ್ಠರಾಗಲಿ ಯಾರೊಬ್ಬರು ಗಂಭೀರವಾಗಿ ಪರಿಗಣಿಸಿದೆ. ಭ್ರಷ್ಟರನ್ನೇ ರಕ್ಷಿಸಲು ಹೊರಟಿರುವುದು ಪ್ರಜಾಪ್ರಭುತ್ವದ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.