ಭ್ರೂಣಹತ್ಯೆ ಪರಿಣಾಮ ಹೆಣ್ಮಕ್ಕಳ ಸಂಖ್ಯೆ ಕುಸಿತ: ಪ್ರೇಮಾ ಕಾರ್ಯಪ್ಪ
ಹಾಸನ, ಮಂಗಳವಾರ, 20 ಜುಲೈ 2010( 15:01 IST )
ತಾತ್ಸರ ಹಾಗೂ ಭ್ರೂಣಹತ್ಯೆಯ ಕಾರಣಗಳಿಂದ ಹೆಣ್ಣುಮಕ್ಕಳ ಅನುಪಾತ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಪ್ರೇಮಾ ಕಾರ್ಯಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಹತ್ತು ದಿನಗಳ ಮಹಿಳಾ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯ ಭ್ರೂಣಹತ್ಯೆ ದೊಡ್ಡ ಸಾಮಾಜಿಕ ಪಿಡುಗಾಗಿದೆ. ಇದರ ನಿಯಂತ್ರಣಕ್ಕೆ ಸರಕಾರ ಸಾಕಷ್ಟು ಶ್ರಮಿಸುತ್ತಿದ್ದರೂ, ಕದ್ದುಮುಚ್ಚಿ ನಡೆಯುತ್ತಿರುವುದರಿಂದ ನಿಯಂತ್ರಣ ಸಾಧ್ಯವಾಗಿಲ್ಲ ಎಂದರು.
ಪ್ರಸ್ತುತ ಸಾವಿರ ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣುಮಕ್ಕಳ ಅನುಪಾತ 870ರಷ್ಟಿದೆ. ಹರಿಯಾಣ, ಬಿಹಾರದಲ್ಲಿ ಸಾವಿರ ಗಂಡಿಗೆ 600 ಹೆಣ್ಣು ಮಕ್ಕಳಿದ್ದಾರೆ. ಪರಿಣಾಮವಾಗಿ, ವಿವಾಹ ಆಗಬೇಕೆಂದರೆ, ಗಂಡಿಗೆ ಹೆಣ್ಣು ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗಂಡಿಗೆ ಹೆಣ್ಣು ಸರಿಸಮಾನಳು ಎಂಬ ಮನೋಭಾವ ಮೂಡಬೇಕು. ಈ ಹಿನ್ನೆಲೆಯಲ್ಲಿ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಮಾಜ ಕಲ್ಯಾಣ ಮಂಡಳಿ 1953ರಿಂದ ನಿರಂತರವಾಗಿ ಶ್ರಮಿಸುತ್ತಿದೆ ಎಂದ ಅವರು, ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಕನಸಿನಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪ್ರಸ್ತುತ ಶೇ.38 ರಷ್ಟು ಮಹಿಳೆಯರು ಚುನಾಯಿತರಾಗುತ್ತಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಈ ಪ್ರಮಾಣ ಶೇ.50ಕ್ಕೆ ಏರಿಕೆಯಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ದೇಶದ 33 ರಾಜ್ಯಗಳಲ್ಲಿ ಸಮಾಜ ಕಲ್ಯಾಣ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷವಾಗಿ ಗ್ರಾಮೀಣ ಮಹಿಳೆಯರು, ಸ್ತ್ರೀ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಮಂಡಳಿ ಏರ್ಪಡಿಸಿರುವ ಹತ್ತು ದಿನಗಳ ಜಾಗೃತಿ ಶಿಬಿರಕ್ಕೆ 10 ಸಾವಿರ ರೂ. ಏನೇನೂ ಸಾಕಾಗುವುದಿಲ್ಲ. ಆದ್ದರಿಂದ ಹೆಚ್ಚು ಹಣ ನೀಡಬೇಕು ಹಾಗೂ ನಾಲ್ಕು ದಿನಗಳ ಶಿಬಿರ ನಡೆಸಲು ಅನುಮತಿ ನೀಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.