ಕೂಲಿಕಾರರ ಹೆಸರಿನಲ್ಲಿ ದುಡ್ಡು ಹೊಡೆಯುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಲಿಕಾರರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡುವ ಮೂಲಕ ಬಡವರ ತೆರಿಗೆ ಹಣವನ್ನು ಹಗಲು ದರೋಡೆ ಮಾಡುತ್ತಿದ್ದರೂ ಸರಕಾರ ಕೈ ಕಟ್ಟಿ ಕುಳಿತಿರುವುದು ನಾಚಿಕೆಗೇಡು ಎಂದರು.
ಮಹಾತ್ಮಾಗಾಂಧಿ ಹೆಸರಿನ ಈ ಉದ್ಯೋಗ ಖಾತ್ರಿ ಯೋಜನೆ ಅವ್ಯವಹಾರದಿಂದ 'ಅಭಿವೃದ್ದಿ' ಎಂದರೆ 'ಭ್ರಷ್ಟಾಚಾರ' ಎಂದು ವ್ಯಾಖ್ಯಾನಿಸುವಂತಾಗಿದೆ ಎಂದು ಟೀಕಿಸಿದರು.
ಅರಕಲಗೂಡು ತಾಲೂಕಿನಲ್ಲಿ 10 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಒಂದು ತಿಂಗಳ ಹಿಂದೆಯೇ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಖುದ್ದು ಭೇಟಿ ಮಾಡಿ ದೂರು ನೀಡಿದ್ದೆ. ಬಳಿಕ ಮತ್ತೊಮ್ಮೆ ದೂರು ನೀಡಿದೆ. ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಕ್ರೋಶಗೊಂಡು ಸೋಮವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾಗಿ ಹೇಳಿದರು. ಎಂಜಿನಿಯರ್‌ಗಳು ಸ್ಥಳಕ್ಕೆ ಹೋಗುವುದಿಲ್ಲ. ಕುಳಿತಲ್ಲೇ ಯೋಜನೆ ತಯಾರಿಸಿ, ಬಿಲ್ ಬರೆಯುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗತಿ ಏನು ? ಎಂದು ಪ್ರಶ್ನಿಸಿದರು.