ಅಕ್ರಮ ಗಣಿ ಹಗರಣ ಕುರಿತಂತೆ ಕಾಂಗ್ರೆಸ್ ಪಾದಯಾತ್ರೆಗೆ ಪ್ರತಿಯಾಗಿ ಸಚಿವ ಶ್ರೀರಾಮುಲು ಬಳ್ಳಾರಿಯಿಂದ ಮೈಸೂರಿಗೆ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರೆಡ್ಡಿ ಅವರು ಶುಕ್ರವಾರ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಪಾದಯಾತ್ರೆಗೆ ಮನವೊಲಿಸುವ ಕಸರತ್ತು ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡಿ ಲಾಭ ಮಾಡಿಕೊಳ್ಳುತ್ತಾರೆ. ಅದೇ ರೀತಿ ನಮ್ಮ ಪಕ್ಷದ ವತಿಯಿಂದಲೂ ಬಳ್ಳಾರಿಯಿಂದ ಮೈಸೂವರಿಗಿನ ಪಾದಯಾತ್ರೆ ನಡೆಸುವುದು ಅಗತ್ಯ. ಆ ನಿಟ್ಟಿನಲ್ಲಿ ಕಾಂಗ್ರೆಸ್ಸಿಗೆ ತಿರುಗೇಟು ನೀಡಬೇಕು ಎಂಬ ವಾದ ರೆಡ್ಡಿಯವರದ್ದು. ಆದರೆ ಇದಕ್ಕೆ ಯಡಿಯೂರಪ್ಪ ಅವರು ಪಾದಯಾತ್ರೆ ಬೇಡ, ಇದು ಪಕ್ಷದ ತೀರ್ಮಾನ ಎಂದು ನುಣುಚಿಕೊಂಡಿದ್ದಾರೆ.
ಏತನ್ಮಧ್ಯೆ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರನ್ನೂ ಆಹ್ವಾನಿಸಲಾಗಿದೆ. ಹೀಗಾಗಿ ಪಾದಯಾತ್ರೆ, ರಾಲಿ ಬೇಡ ಎನ್ನುವುದು ಸರಿಯಲ್ಲ ಎಂದು ರೆಡ್ಡಿ ಮನವರಿಕೆ ಮಾಡಿದ್ದಾರೆ. ಇವೆಲ್ಲ ತಿಕ್ಕಾಟದ ನಡುವೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ರೆಡ್ಡಿ ಆಪ್ತ ಶಾಸಕರೇ ವಿರೋಧ ವ್ಯಕ್ತಪಡಿಸುವ ಮೂಲಕ ರೆಡ್ಡಿ ಸಹೋದರರ ಪಾದಯಾತ್ರೆಗೆ ಆರಂಭದಲ್ಲೇ ವಿಘ್ನ ಉಂಟಾಗುವ ಮೂಲಕ ಪಕ್ಷದೊಳಗೆ ಜಟಾಪಟಿ ಆರಂಭಗೊಂಡಿದೆ.