ಕ್ರಿಮಿನಲ್ ಹಿನ್ನೆಲೆಯ ರೆಡ್ಡಿ ಬ್ರದರ್ಸ್ ಅಗತ್ಯವೇ?: ಎಚ್‌ಡಿಕೆ
ಹುಬ್ಬಳ್ಳಿ, ಸೋಮವಾರ, 26 ಜುಲೈ 2010( 11:46 IST )
ಅಕ್ರಮ ಗಣಿಗಾರಿಕೆ, ರೆಡ್ಡಿ ಸಹೋದರರ ಅಕ್ರಮಗಳ ಕುರಿತು ವಿರೋಧ ಪಕ್ಷಗಳ ಟೀಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಬದಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಾಕತ್ತಿದ್ರೆ ಬಳ್ಳಾರಿ ಜಿಲ್ಲೆಯಲ್ಲಿ ಹದಗೆಟ್ಟಿರುವ ಕಾನೂನು ವ್ಯವಸ್ಥೆ, ದಬ್ಬಾಳಿಕೆಯನ್ನು ತಡೆಯಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಆಡಳಿತಾರೂಢ ಬಿಜೆಪಿ ಸರಕಾರದಲ್ಲಿರುವ ಬಳ್ಳಾರಿ ಸಚಿವರುಗಳ ಮೇಲಿರುವ ಕ್ರಿಮಿನಲ್ ಕೇಸ್, ಬಲಾತ್ಕಾರ, ಮಂದಿರ ಸ್ಫೋಟ, ದಬ್ಬಾಳಿಕೆ ನಡೆಸುತ್ತಿರುವ ಪ್ರಕರಣ ದಾಖಲಾಗಿದ್ದರು ಕೂಡ ಮುಖ್ಯಮಂತ್ರಿಗಳು ಅವರ ರಕ್ಷಣೆಗೆ ಮುಂದಾಗಿದ್ದಾರೆ. ಇಂಥ ಕ್ರಿಮಿನಲ್ ಸಚಿವರು ನಮಗೆ ಬೇಕೆ? ಎಂದು ಪ್ರಶ್ನಿಸಿದರು.
ಒಂದು ವೇಳೆ ಮುಖ್ಯಮಂತ್ರಿಗಳು ಬಳ್ಳಾರಿ ಸಚಿವರ ಆಡಳಿತ ವೈಖರಿ, ದಬ್ಬಾಳಿಕೆ ಬಗ್ಗೆ ಕ್ರಮ ಕೈಗೊಂಡ 24ಗಂಟೆಗಳಲ್ಲಿ ಅವರ ಕುರ್ಚಿ ಹೋಗುತ್ತದೆ ಎಂದು ದೂರಿದರು. ಬಳ್ಳಾರಿ ಗಣಿಧಣಿಗಳನ್ನು ಎದುರು ಹಾಕಿಕೊಳ್ಳುವ ಧೈರ್ಯ ಇಲ್ಲದಿದ್ದ ಪರಿಣಾಮವಾಗಿ ಬಳ್ಳಾರಿ ಜಂಗಲ್ ರಾಜ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಬಳ್ಳಾರಿ ಸಚಿವರು ತಮ್ಮ ಮೇಲೆ ದಾಖಲಾಗಿರುವ ಕ್ರಿಮಿನಲ್ ಆರೋಪಗಳನ್ನು ಸರಕಾರದ ಮೂಲಕ ವಾಪಸ್ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಕಂದಾಯ ಸಚಿವ ಕರುಣಾಕರ ರೆಡ್ಡಿ ನಿಮಗೆ(ಮಾಧ್ಯಮದವರಿಗೆ) ಸಿಕ್ಕಾಗ, ನಿಮ್ಮ ಬಳ್ಳಾರಿಯಲ್ಲಿ ಮುಖ್ಯಪೇದೆ ಮಗಳ ಮೇಲೆ ರೇಪ್ ಆಗಿತ್ತಲ್ಲಾ, ಆ ಕೇಸು ಈಗ ಏನಾಗಿದೆ ಅಂತ ಅವರನ್ನೇ ಕೇಳಿ ಸೂಕ್ತ ಉತ್ತರ ದೊರೆಯುತ್ತದೆ ಎಂದರು.
ಇಷ್ಟೆಲ್ಲಾ ಕ್ರಿಮಿನಲ್ ಪ್ರಕರಣ ಹೊತ್ತುಕೊಂಡಿರುವ ಈ ಸಚಿವರು ತಮ್ಮನ್ನು ತಾವೇ ಅಪರಂಜಿ ಎಂದು ಹೇಳುತ್ತ, ಇನ್ನೊಬ್ಬರ ಮೇಲೆ ವಾಗ್ದಾಳಿ ನಡೆಸುತ್ತಾರೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.