ಬಿಜೆಪಿ ಸರಕಾರದ ಪತನದ ದಿನಗಳಿಗೆ ಈ ಪಾದಯಾತ್ರೆ ನಾಂದಿಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಭವಿಷ್ಯ ನುಡಿದಿದ್ದಾರೆ.
ಸೋಮವಾರ 2ನೇ ದಿನದ ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಅವರು, ಅರಶಿನಕುಂಟೆ ಸಮೀಪ ಸುದ್ದಿಗಾರರೊಂದಿಗೆ ಮಾತನಾಡಿ, ಪಾದಯಾತ್ರೆಯಲ್ಲಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿದೆ. ಪಕ್ಷದ ಪಾದಯಾತ್ರೆ ಭ್ರಷ್ಟ ಬಿಜೆಪಿ ಸರಕಾರದ ಪತನದ ದಿನಗಳಿಗೆ ನಾಂದಿಯಾಗಲಿದೆ ಎಂದರು.
ಈ ಭ್ರಷ್ಟ ಸರಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ. ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆಗೆ ಜನ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡುತ್ತಿದ್ದಾರೆ. ಬಳ್ಳಾರಿಯಲ್ಲಿ ಈ ಪಾದಯಾತ್ರೆ ಆ.9ರಂದು ಅಂತ್ಯವಾದರೂ ಈ ಸರಕಾರದ ಪತನದ ಆರಂಭ ಅಂದಿನಿಂದ ಪ್ರಾರಂಭವಾಗಲಿದೆ ಎಂದು ದೇಶಪಾಂಡೆ ಹೇಳಿದರು.
ಪಾದಯಾತ್ರೆಗೆ ಕೇಂದ್ರದ ಯಾವ ನಾಯಕರನ್ನೂ ಆಹ್ವಾನಿಸಿಲ್ಲ. ಪಕ್ಷದ ಹಿರಿಯರ ಆಶೀರ್ವಾದ ಪಡೆದು ಪಾದಯಾತ್ರೆ ನಡೆಸುತ್ತಿದ್ದೇವೆ. ಪಾದಯಾತ್ರೆ ಸಂದರ್ಭದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕೆಲವು ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಯಾತ್ರೆಯ ಕೊನೆಯ ದಿನ ಗುಲಾಂ ನಬಿ ಆಜಾದ್ ಸೇರಿದಂತೆ ಕೇಂದ್ರದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.