ಬಿಜೆಪಿ ಸರಕಾರದ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆಯ ವಿರುದ್ಧ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ 2ನೇ ದಿನದ ಪಾದಯಾತ್ರೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಕೈಯಲ್ಲಿ ಕತ್ತಿ ಹಿಡಿದು ವೀರಗಾಸೆ ತಂಡದ ತಮಟೆಗೆ ಹೆಜ್ಜೆ ಹಾಕುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ ಘಟನೆ ನಡೆಯಿತು.
ಸೋಮವಾರ ನೆಲಮಂಗಲದಿಂದ ಹೊರಟಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವೀರಗಾಸೆ ತಂಡದವರಿಂದ ಕತ್ತಿಯನ್ನು ಕೈಗೆ ತೆಗೆದುಕೊಂಡ 63ರ ಹರೆಯದ ಸಿದ್ದರಾಮಯ್ಯ ವೀರಗಾಸೆ ತಂಡದ ತಮಟೆ, ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ, ಕಾರ್ಯಕರ್ತರ ಆಕರ್ಷಣೆಯ ಕೇಂದ್ರ ಬಿಂದುವಾದರು.
ನಂತರ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಡೋಲು ಬಡಿದು ಕಾರ್ಯಕರ್ತರಲ್ಲಿ ಹುರುಪು ತುಂಬಿದರು. ಈ ಸಂದರ್ಭದಲ್ಲಿ ಬಿ.ಸಿ.ಪಾಟೀಲ್, ರೋಷನ್ ಬೇಗ್, ತೇಜಸ್ವಿನಿ, ವಿನಯ್ ಕುಮಾರ್ ಸೊರಕೆ ಮುಂತಾದ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು. ಅಷ್ಟೇ ಅಲ್ಲ ನಟ, ಶಾಸಕ ಬಿ.ಸಿ.ಪಾಟೀಲ್ ತಾನೇನು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಡೈಲಾಗ್ ಹೊಡೆದರು, ವಿಧಾನಪರಿಷತ್ ವಿಪಕ್ಷಿ ನಾಯಕಿ ಮೋಟಮ್ಮ ಕೂಡ ಡೋಲು, ತಮಟೆಗೆ ಹೆಜ್ಜೆ ಹಾಕಿ ಪಾದಯಾತ್ರೆಯುದ್ದಕ್ಕೂ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ತುಂಬಾ ದೂರದ ತನಕ ಕಾಲ್ನಡಿಗೆಯಲ್ಲಿ ಸಾಗಬೇಕಾಗಿದ್ದರಿಂದ, ಕಾರ್ಯಕರ್ತರಿಗೆ ಬೋರ್ ಆಗಬಾರದು ಎಂಬ ದೃಷ್ಟಿಯಿಂದ ತಾವು ಡೋಲು, ತಮಟೆಗೆ ಹೆಜ್ಜೆ ಹಾಕಿರುವುದಾಗಿ ಸಿದ್ದರಾಮಯ್ಯ, ದೇಶಪಾಂಡೆ ಅಭಿಪ್ರಾಯವ್ಯಕ್ತಪಡಿಸಿದರು.