ಕಾಂಗ್ರೆಸ್ ಪಕ್ಷದ ಪಾದಯಾತ್ರೆಯನ್ನು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ, ಅಲ್ಲಾರಿ ನೀನು ಬಸ್‌ಸ್ಟ್ಯಾಂಡ್‌ನಲ್ಲಿ ಲವ್ ಮಾಡಿ ರೆಸಾರ್ಟ್‌ನಲ್ಲಿ ಬಸಿರು ಮಾಡಿದ್ದಕ್ಕೆ ತಾನೇ ರಾಜ್ಯದ ಜನತೆ ಇಂತಹ ಪರಿಸ್ಥಿತಿ ಅನುಭವಿಸುತ್ತಿರುವುದು. ಕೊಟ್ಟ ಮಾತಿನಂತೆ 20 ತಿಂಗಳು ಬಿಜೆಪಿಗೆ ಅಧಿಕಾರ ಕೊಟ್ಟಿದ್ದರೆ ನಾವು ಐದು ವರ್ಷ ಈ ದರಿದ್ರ ನೋಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹಾಸ್ಯ ಮಿಶ್ರಿತ ಮಾತಿನಿಂದ ಚುಚ್ಚಿದರು.
ಕಾಂಗ್ರೆಸ್ ಪಾದಯಾತ್ರೆ 2ನೇ ದಿನವಾದ ಸೋಮವಾರ ನೆಲಮಂಗಲದಲ್ಲಿ ನಡೆದ ಬಹಿರಂಗಸಭೆಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆದ ಯಡಿಯೂರಪ್ಪ, ರೆಡ್ಡಿ, ಸುಷ್ಮಾ ಸ್ವರಾಜ್ ಹಾಗೂ ಎಚ್‌ಡಿಕೆ ವಿರುದ್ಧ ತಮ್ಮ ಹಾಸ್ಯ ಮಿಶ್ರಿತ ಮಾತಿನ ಮೋಡಿಯಿಂದ ವ್ಯಂಗ್ಯವಾಡಿದರು.
ಗೋವಿಂದರಾಜನಗರದ ಸೋಮಣ್ಣ, ಚನ್ನಪಟ್ಟಣದ ಯೋಗೀಶಾ, ತುರುವೇಕೆರೆ ಜಗ್ಗೀಶಾ(ಜಗ್ಗೇಶ್) ಇವರೆಲ್ಲ ಕಾಂಗ್ರೆಸ್‌ನ ಮಕ್ಕಳು, ಅವರನ್ನೆಲ್ಲಾ ಆಪರೇಶನ್ ಕಮಲದ ಮೂಲಕ ಸೆಳೆದು ನಮ್ಮ ಮಕ್ಕಳು ಎನ್ನುತ್ತೀರಲ್ಲ ಮುಖ್ಯಮಂತ್ರಿಗಳೇ, ನಿಮಗೆ ಪುರುಷತ್ವ ಇಲ್ಲವೇ. ಹಾಗಾದ್ರೆ ಸಿದ್ದಗಂಗಾ ಮಠಕ್ಕೆ ಬಂದು ಸ್ನಾನ ಮಾಡಿ ಪುರುಷತ್ವ ಪಡೆದುಕೊಳ್ಳಿ ಎಂದು ಲೇವಡಿ ಮಾಡಿದರು.
ಮತ್ತೊಂದೆಡೆ ನಮ್ಮ ಅಮ್ಮ ಸುಷ್ಮಾ ಎಂದು ಗೋಗರೆಯುತ್ತಿರುವ ರೆಡ್ಡಿಗಳು, ಆಹಾ ಎಂತಹ ಮಕ್ಕಳನ್ನ ಹಡೆದೆ ಅವ್ವಾ...ಕೋಟಿ, ಕೋಟಿ ಲೂಟಿ ಮಾಡಿ ರಾಜ್ಯದ ಬೊಕ್ಕಸಕ್ಕೆ ಕನ್ನ ಹಾಕಿದ್ರಲ್ಲ. ಇವರಿಗೆ ಏನೆನ್ನಬೇಕು ಎಂದರು. ಹೀಗೆ ವಚನಗಳನ್ನು ಉದಾಹರಿಸುತ್ತ ಆಡಳಿತಾರೂಢ ಬಿಜೆಪಿ ಮತ್ತು ನಾಯಕರ ವಿರುದ್ಧ ಹಾಸ್ಯವಾಗಿ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.