ಬಳ್ಳಾರಿ ಜಿಲ್ಲೆಗೆ ವಿಪಕ್ಷಗಳಿಂದ ಆಗಿರುವ ಅವಮಾನ ಸಹಿಸಲಾರೆ ಎಂದಿರುವ ಆರೋಗ್ಯ ಸಚಿವ ಶ್ರೀರಾಮುಲು ಅದಕ್ಕಾಗಿಯೇ ನಾನು ಮುಡಿ (ಕೂದಲು) ಸಲ್ಲಿಸಿರುವೆ. ಅಷ್ಟೇ ಅಲ್ಲ ವರಮಹಾಲಕ್ಷ್ಮಿ ಹಬ್ಬದವರೆಗೂ ಪಾದರಕ್ಷೆ ಇಲ್ಲದೆ ಓಡಾಡುವೆ. ಕಪ್ಪು ಬಟ್ಟೆ ಧರಿಸಿ, ಸಸ್ಯಹಾರ ಸೇವಿಸುವುದಾಗಿ ತಿಳಿಸಿದ್ದಾರೆ.
ಬುಧವಾರ ಹಾವಂಬಾವಿಯಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಕುರಿತು ವಿಪಕ್ಷಗಳು ನಡೆಸಿರುವ ಟೀಕೆಯ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಸಚಿವನಾಗಿಲ್ಲ. ಜನರ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ. ನಾವು ಅಧಿಕಾರದಲ್ಲಿ ಇರಬೇಕೋ ಅಥವಾ ಬೇಡವೋ ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಮುಖಂಡರು ಬಳ್ಳಾರಿ ಜಿಲ್ಲೆಗೆ ಮಾಡಿರುವ ಅವಮಾನವನ್ನು ಸಹಿಸಲಾರೆ. ಅದಕ್ಕಾಗಿ ಕಠಿಣ ವೃತ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದರು. ವರಮಹಾಲಕ್ಷ್ಮಿ ಹಬ್ಬದವರೆಗೂ ವೃತಾಚರಣೆ ನಡೆಸುವುದಾಗಿ ತಿಳಿಸಿದರು. ಕಾಂಗ್ರೆಸ್ ಪಾದಯಾತ್ರೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಕಾಂಗ್ರೆಸ್ ಪಾದಯಾತ್ರೆಗೆ ಪ್ರತಿಯಾಗಿ ನಾಳೆಯಿಂದಲೇ ತಾವು ಕೂಡ ಪಾದಯಾತ್ರೆ ನಡೆಸುವುದಾಗಿ ಹೇಳಿದರು.
ನಾಳೆ ಮೋಕಾದಲ್ಲಿ ಬಹಿರಂಗ ಸಭೆ ನಡೆಸುತ್ತೇವೆ. ಜುಲೈ 31ರಂದು ಕಂಪ್ಲಿಯಲ್ಲಿ ಸಮಾವೇಶ, ನಂತರ ಉಳಿದೆಡೆ ಸಮಾವೇಶ ನಡೆಸುವುದಾಗಿ ಈ ಸಂದರ್ಭದಲ್ಲಿ ಹೇಳುವ ಮೂಲಕ ಕಾಂಗ್ರೆಸ್ ಪಾದಯಾತ್ರೆಗೆ ಶ್ರೀರಾಮುಲು ಮತ್ತು ರೆಡ್ಡಿ ಬ್ರದರ್ಸ್ ಸಡ್ಡು ಹೊಡೆದಿದ್ದಾರೆ.
ರಾಜೀನಾಮೆ ಕೊಡಲ್ಲ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂಬುದು ಬರೇ ವದಂತಿ, ಎಲ್ಲಿಯವರೆಗೆ ತಾಯಿ ಸುಷ್ಮಾ ಸ್ವರಾಜ್ ಅವರ ಆಶೀರ್ವಾದ ಇರುತ್ತದೋ ಅಲ್ಲಿಯವರೆಗೆ ಸಚಿವನಾಗಿ ಮುಂದುವರಿತ್ತೇನೆ. ಈ ರಾಜ್ಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದ ಸಚಿವ ಶ್ರೀರಾಮುಲು, ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.