ಸಾವಿರಾರು ಕೋಟಿ ರೂಪಾಯಿಯ ಅದಿರನ್ನು ಕಳವು ಮಾಡಿರುವುದು ರಾಷ್ಟ್ರದಲ್ಲೇ ದೊಡ್ಡ ಹಗರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಜೀಂ ಕಿಡಿಕಾರಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಟ್ಯಂತರ ರೂ. ಮೌಲ್ಯದ ಅದಿರು ಕಳ್ಳಸಾಗಣೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಬೇಲೆಕೇರಿ ಬಂದರಿನಿಂದ ಅದಿರು ಹೊರದೇಶಗಳಿಗೆ ಹೋಗಿರುವುದರಿಂದ ರಾಜ್ಯದ ಲೋಕಾಯುಕ್ತರಿಂದ ಅದರ ತನಿಖೆ ಅಸಾಧ್ಯ. ಆದ್ದರಿಂದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ರೆಡ್ಡಿ ಸಚಿವತ್ರಯರ ವಿರುದ್ಧ ವಾಗ್ದಾಳಿ ನಡೆಸಿದ ಅಜೀಂ, ರಾಜ್ಯದಲ್ಲಿ ಡೆಂಗೆ ಜ್ವರ ವಿಪರೀತವಾಗಿದ್ದರೂ, ಆರೋಗ್ಯ ಸಚಿವರು ಯಾವ ಜಿಲ್ಲೆಗೂ ಭೇಟಿ ನೀಡಿಲ್ಲ. ಅವರ ಕಾರ್ಯದರ್ಶಿ ಹೆಲಿಕಾಪ್ಟರ್‌ನಲ್ಲಿ ಬಳ್ಳಾರಿಗೆ ಹೋಗಿ ಫೈಲ್‌ಗಳಿಗೆ ಸಹಿ ಮಾಡಿಸಿಕೊಂಡು ಬರುತ್ತಾರೆ. ವಿಧಾನಸೌಧದಲ್ಲಿ ಇದುವರೆಗೆ 20 ದಿನವೂ ಅವರು ಕುಳಿತಿಲ್ಲ. ಮಹತ್ವದ ಸ್ಥಾನದಲ್ಲಿರುವ ಕಂದಾಯ ಸಚಿವರು ಇಲ್ಲಿವರೆಗೆ ಎಷ್ಟು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಾರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಹಣ ನೀಡಿ, ಅದನ್ನು ಖರ್ಚು ಮಾಡಲು ಬಿಡದೆ ಪುನಃ ವಾಪಸ್ ಪಡೆಯುವ ಈ ಸರಕಾರದಿಂದ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುವ ಭರವಸೆ ಇಲ್ಲವೆಂದು ದೂರಿದರು.