ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬದಲಾದ ಸ್ವಾಮಿನಿಷ್ಠೆ: ರೆಡ್ಡಿಗಳ ವಿರುದ್ಧ ರೇಣು ಪಡೆ ಉಲ್ಟಾ! (Renukacharya | BJP | Janardana Reddy | Yeddyurappa | Siddaramaiah)
ಬದಲಾದ ಸ್ವಾಮಿನಿಷ್ಠೆ: ರೆಡ್ಡಿಗಳ ವಿರುದ್ಧ ರೇಣು ಪಡೆ ಉಲ್ಟಾ!
ಬೆಂಗಳೂರು, ಶನಿವಾರ, 31 ಜುಲೈ 2010( 11:14 IST )
ರೆಡ್ಡಿ ಬಣದೊಂದಿಗೆ ಗುರುತಿಸಿಕೊಂಡು, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ವಾಗ್ದಾಳಿ ನಡೆಸಿದ್ದ ಅಬಕಾರಿ ಸಚಿವ ರೇಣುಕಾಚಾರ್ಯ ಪಟಾಲಂ ಇದೀಗ ರೆಡ್ಡಿ ಸಹೋದರರ ವಿರುದ್ಧ ತಿರುಗಿ ಬಿದ್ದಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರೆಡ್ಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೆಡ್ಡಿ ಸಹೋದರರ ವಿರುದ್ಧವೇ ಸಮರ ಸಾರುವ ಮೂಲಕ ಸಿಎಂಗೆ ಸ್ವಾಮಿನಿಷ್ಠೆ ತೋರಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಸರಕಾರದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಲ್ಲಿ ನಾವು ಮುಖ್ಯಮಂತ್ರಿಗಳ ಕೈಬಿಡುವುದಿಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರ ತೀರ್ಮಾನವೇ ಅಂತಿಮ. ಮತ್ಯಾವುದೇ ಆಟ ನಡೆಯುವುದಿಲ್ಲ. ಮುಖ್ಯಮಂತ್ರಿಗಳಿಗೆ ತಾವು ಕೈಗೊಂಡ ತೀರ್ಮಾನವನ್ನು ಅರಗಿಸಿಕೊಳ್ಳುವ ಶಕ್ತಿ ಇದೆ ಎಂದು ಸಿಎಂ ವಿರೋಧಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಅಲ್ಲದೇ, ಶಾಸಕರು ಮತ್ತು ಸಚಿವರು ಗುರುವಾರ ರಾತ್ರಿ ಸಭೆ ನಡೆಸಿದ್ದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಅದು ಗುಪ್ತ ಸಭೆಯೂ ಇಲ್ಲ. ಅದಕ್ಕೆ ರಾಜಕೀಯ ಲೇಪ ಹಚ್ಚಬೇಕಾಗಿಲ್ಲ. ನಾವು ಆಗಾಗ್ಗೆ ಒಂದೆಡೆ ಸೇರಿ ಉಭಯ ಕುಶಲೋಪರಿ ಹಂಚಿಕೊಳ್ಳುತ್ತೇವೆ ಎಂದು ರೇಣುಕಾಚಾರ್ಯ ಸಮಜಾಯಿಷಿ ನೀಡಿದರು.
ಬಿಜೆಪಿ ಸರಕಾರ ಕಳೆದ ಎರಡು ವರ್ಷಗಳಲ್ಲಿ ಒಳ್ಳೆಯ ಕೆಲಸ ಮಾಡಿದೆ. ಮುಂದಿನ ಮೂರು ವರ್ಷದಲ್ಲಿ ಇನ್ನಷ್ಟು ಒಳ್ಳೆಯ ಕೆಲಸ ಮಾಡಲಿದೆ. ಕಾಂಗ್ರೆಸ್ ಕೈಗೊಂಡಿರುವ ಬಳ್ಳಾರಿ ಪಾದಯಾತ್ರೆಯಿಂದ ಯಾವುದೇ ಆತಂಕ, ಭಯ ಇಲ್ಲ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಿರಿಯರು. ಅವರ ಬಗ್ಗೆ ಅಪಾರ ನಂಬಿಕೆ ಇದೆ ಎಂದು ಹೇಳಿದರು.