ಆಡಳಿತಾರೂಢ ಸರಕಾರವನ್ನು ನಡುಗಿಸುತ್ತಿದ್ದ ಬಳ್ಳಾರಿ ಗಣಿಧಣಿಗಳ ವಿರುದ್ಧ ಇದೀಗ ಬಿಜೆಪಿ ಮುಖಂಡರೇ ತಿರುಗಿ ಬಿದ್ದಿದ್ದಾರೆ. ಆ ನಿಟ್ಟಿನಲ್ಲಿ ಸರಕಾರ ಉಳಿಸಲು ಜೆಡಿಎಸ್ ಜೊತೆಗೆ ಕೈಜೋಡಿಸುವುದು ಸೇರಿದಂತೆ ಯಾವುದೇ ರೀತಿಯ ತಂತ್ರಕ್ಕೂ ಸಿದ್ದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿ ಹೇಳುವ ಮೂಲಕ ಬಳ್ಳಾರಿ ಸಚಿವರಿಗೆ ಪರೋಕ್ಷವಾಗಿ ಸಡ್ಡು ಹೊಡೆದಿದ್ದಾರೆ.
ದಾವಣಗೆರೆಯಲ್ಲಿ ಶುಕ್ರವಾರ ಸಾಧನಾ ಸಮಾವೇಶದ ಸಿದ್ದತೆ ಪರಿಶೀಲಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಐದು ವರ್ಷ ಆಡಳಿತ ನಡೆಸಲು ಅಗತ್ಯವಿರುವ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಲಾಗುವುದು. ಅಗತ್ಯವೆನಿಸಿದರೆ ಜೆಡಿಎಸ್ ಜೊತೆ ದೋಸ್ತಿಗೂ ಸಿದ್ದ, ಅಥವಾ ಮುಸ್ಲಿಮ್ ಲೀಗ್ ಜತೆಗೂ ಕೈಜೋಡಿಸುತ್ತೇವೆ ಎಂದರು.
ರಾಜ್ಯ ಮಟ್ಟದ ಪಾದಯಾತ್ರೆ ನಾವು ಮಾಡುವುದಿಲ್ಲ. ಈಗಾಗಲೇ ಸಚಿವ ಶ್ರೀರಾಮುಲು ಬಳ್ಳಾರಿ ಜಾಗೃತಿ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದರು. ಉಳಿದಂತೆ ಬಳ್ಳಾರಿಯಲ್ಲಿ ಶ್ರೀರಾಮುಲು ಚಟುವಟಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಅವರನ್ನೇ ಕೇಳಿ ಎಂದು ಜಾರಿಕೊಂಡರು.
ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡ ಬೆನ್ನಲ್ಲೇ ರಾಜ್ಯರಾಜಕಾರಣದಲ್ಲಿನ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಅಷ್ಟೇ ಅಲ್ಲ ಆಡಳಿತಾರೂಢ ಬಿಜೆಪಿ ಸರಕಾರಕ್ಕೂ ಬಿಸಿ ಮುಟ್ಟಿಸಿದ್ದರೆ, ಮತ್ತೊಂದೆಡೆ ಬಳ್ಳಾರಿ ಸಚಿವರ ನಡವಳಿಕೆ ಬಿಜೆಪಿಗೆ ಅಸಮಾಧಾನ ತಂದಿರುವುದು ಬಹಿರಂಗಗೊಂಡತಾಗಿದೆ.
ಬಳ್ಳಾರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆಯುತ್ತಿರುವ ಸ್ವಾಭಿಮಾನಿ ಸಮಾವೇಶದ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿ, ರೆಡ್ಡಿ ಸಹೋದರರ ಸಮಾವೇಶದ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದರು. ಇದರಿಂದಾಗಿ ರಾಜ್ಯ ರಾಜಕೀಯ ವಲಯದಲ್ಲಿ ಮತ್ತೆ ಕುತೂಹಲ ಕೆರಳಿಸಿದೆ.
ಏತನ್ಮಧ್ಯೆ ಸಚಿವರಾದ ಬಾಲಚಂದ್ರ ಜಾರಕಿಹೊಳೆ, ಎಂ.ಪಿ.ರೇಣುಕಾಚಾರ್ಯ ಮತ್ತು 13 ಮಂದಿ ಶಾಸಕರು ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿ, ಪಕ್ಷ ಮತ್ತು ಸರಕಾರ ಉಳಿಸಲು ಯಾವ ಕ್ರಮ ಬೇಕಾದರೂ ಕೈಗೊಳ್ಳಬಹುದು. ಬಳ್ಳಾರಿ ಸಚಿವರಿಂದ ಸರಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಅವರ ನಡವಳಿಕೆಯಿಂದಾಗಿ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಅಲ್ಲದೇ, ತಾವು ಎಂತಹ ಕಠಿಣ ಕ್ರಮ ಕೈಗೊಂಡರೂ ನಮ್ಮ ಬೆಂಬಲ ನಿಮಗಿದೆ ಎಂಬುದಾಗಿ ಭರವಸೆಯನ್ನೂ ನೀಡಿದ್ದಾರೆ.
ಜೆಡಿಎಸ್ ಮೈತ್ರಿಗೆ ಸಿದ್ದ-ಕಾರಜೋಳ: ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಬೆಂಬಲ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಾಗಲಕೋಟೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಜೆಡಿಎಸ್ ಜತೆಗಿನ ಮೈತ್ರಿಗೆ ಬಿಜೆಪಿ ಸಿದ್ದ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಜತೆ ಮೈತ್ರಿ ಇಲ್ಲ-ಎಚ್‌ಡಿಕೆ: ರಾಜ್ಯರಾಜಕಾರಣದಲ್ಲಿ ಮತ್ತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಸರಕಾರ ರಚನೆಯಾಗಲಿದೆ ಎಂಬ ಊಹಾಪೋಹದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದು ಮಾಧ್ಯಮಗಳ ಹಾಸ್ಯಾಸ್ಪದ ವರದಿಯಾಗಿದೆ. ನಾವು ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಸೇರಿ ಸರಕಾರ ನಡೆಸುವುದಿಲ್ಲ ಎಂದರು.