ಕೇಂದ್ರ ಸರಕಾರದ ಯೋಜನೆಗಳಿಗೆ ರಾಜ್ಯ ಸರಕಾರವು ತನ್ನ ಲೇಬಲ್ ಹಾಕಿಕೊಳ್ಳುತ್ತಿದೆ ಎಂದು ಸಂಸದ ಎಚ್.ಎಂ.ವಿಶ್ವನಾಥ್ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯ ಬಿಜೆಪಿ ಸರಕಾರಕ್ಕೆ ಗೊತ್ತುಗುರಿ ಇಲ್ಲದಾಗಿದ್ದು, ಬೊಕ್ಕಸದಲ್ಲಿ ಹಣ ಇಲ್ಲ. ಕೇಂದ್ರದ ಉದ್ಯೋಗ ಖಾತ್ರಿ, ಇಂದಿರಾ ಆವಾಸ್ ಮುಂತಾದ ಯೋಜನೆಗಳನ್ನು ರಾಜ್ಯ ಸರಕಾರವು ತನ್ನ ಯೋಜನೆಗಳಂತೆ ಬಿಂಬಿಸುತ್ತಿದೆ ಎಂದರು.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರಿಗೆ ತಲೆ ಕೆಟ್ಟಿದೆ ಎಂದು ಲೇವಡಿ ಮಾಡಿದರು. ಬಳ್ಳಾರಿಗೆ ಬಂದರೆ ನೋಡಿಕೊಳ್ಳುತ್ತೇವೆ ಎಂಬ ಸಚಿವ ಶ್ರೀರಾಮುಲು ಅವರ ಹೇಳಿಕೆಯಿಂದ ಕಾಂಗ್ರೆಸ್‌ಗೆ ಭಯ ಹುಟ್ಟುತ್ತದೆ ಎಂಬುದ ಅವರ ಭ್ರಮೆ. ಸಚಿವ ಶ್ರೀರಾಮುಲುಗೆ ಬಳ್ಳಾರಿಯಲ್ಲಿ ಒಂದು ವರ್ಗದ ಬೆಂಬಲವಿದೆ. ಅದರ ಉಪಯೋಗ ಪಡೆಯಲು ರೆಡ್ಡಿ ಸಹೋದರರು ಶ್ರೀರಾಮುಲು ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ಬಗ್ಗೆ ಕಲಂ 193ರಡಿ ಲೋಕಸಭೆಯಲ್ಲಿ ಎಚ್.ಡಿ.ದೇವೇಗೌಡ ಅವಕಾಶ ಕೋರಿರುವ ಚರ್ಚೆಯಲ್ಲಿ ಪಾಲ್ಗೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗಣಿ ವಿಷಯದ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ ಜೆಡಿಎಸ್ ಜತೆ ಹೊಂದಾಣಿಕೆ ಇಲ್ಲ ಎಂದು ತಿಳಿಸಿದರು.