ಬಳ್ಳಾರಿ ಮುಟ್ಟಿದ ತಕ್ಷಣ ಹೋರಾಟ ನಿಲ್ಲುವುದಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ವಹಿಸುವವರೆಗೆ ನಿರಂತರವಾಗಿರುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಚಳ್ಳಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಾದಯಾತ್ರೆ ನೋಡಿ ರೆಡ್ಡಿಗಳು, ಖುರ್ಚಿ ಕಳೆದುಕೊಳ್ಳುವ ಭಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಶಾಸಕಾಂಗ ಸಭೆಯ ಬಗ್ಗೆ ಸುದ್ದಿಗಾರರ ಕೇಳಿದ ಪ್ರಶ್ನೆಗೆ, ಪಾದಯಾತ್ರೆಯ ಕೊನೆಯ ನಾಲ್ಕು ದಿನ ಕಾಂಗ್ರೆಸ್‌ನ ಎಲ್ಲ ಶಾಸಕರಿಗೂ ಪಾಲ್ಗೊಳ್ಳಲು ತಿಳಿಸಲಾಗಿದೆ. ಪಾದಯಾತ್ರೆಯ ಹಿಂಬದಿ ಒಂದೇ ಸಾಲಿನಲ್ಲಿ ವಾಹನಗಳು ಬರುವಂತೆ ಹಾಗೂ ಶಿಸ್ತು ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ನಿಮ್ಮ ಶಾಸಕರು ಆಪರೇಷನ್ ಕಮಲ, ಹಣಕ್ಕೆ ಮಾರಾಟ ಆಗುತ್ತಾರೆಯೇ ಎಂಬ ಪ್ರಶ್ನೆಗೆ, ಬಿಜೆಪಿ ಸರಕಾರದ ಹಣದ ಪ್ರಭಾವ, ಆಪರೇಷನ್ ಕಮಲ ನಾಟಕ ಮುಗಿದು ಹೋದ ಅಧ್ಯಾಯ. ಕಾಂಗ್ರೆಸ್‌ನ ಯಾವ ಶಾಸಕರು ಹಣದ ಆಸೆ, ಆಮಿಷಕ್ಕೆ ಬಲಿಯಾಗುವುದಿಲ್ಲ, ಪಕ್ಷಾಂತರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಶ್ರೀರಾಮುಲುಗೆ ರಾಜಕೀಯದಲ್ಲಿ ಅನುಭವ ಇಲ್ಲ. ಪ್ರಜಾತಂತ್ರ ಏನು ಅನ್ನುವುದು ಗೊತ್ತಿಲ್ಲ. ಜನರನ್ನು ಪ್ರಚೋದನೆಗೆ ಒಳಪಡಿಸುವ ಭಾಷಣ ಮಾಡುತ್ತಿದ್ದಾರೆ ಇದು ತಪ್ಪು. ರೆಡ್ಡಿಗಳು ಬಳ್ಳಾರಿಗೆ ಜಹಗೀರುದಾರರೇ ಅಥವಾ ಸರ್ವಾಧಿಕಾರಿಗಳೇ? ನಾವು ರೆಡ್ಡಿಗಳ ಕೆಟ್ಟ ರಾಜಕೀಯ ಮತ್ತು ದಮನ ನೀತಿಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.