ರಾಜ್ಯದ ಸಚಿವರಾಗಿ ಶ್ರೀರಾಮುಲು ಹುಡುಗಾಟ ಬಿಟ್ಟು ಬಳ್ಳಾರಿ ಬದಲು ವಿಧಾನಸೌಧದಲ್ಲಿ ಕುಳಿತು ಮಾತನಾಡಲಿ ಎಂದು ಕೆಪಿಪಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಕಾಂಗ್ರೆಸ್ ಪಾದಯಾತ್ರೆಯನ್ನು ಡ್ಯಾನ್ಸ್, ಮೋಜು ಮಸ್ತಿ ಎಂದಿದ್ದಾರೆ. ಆದರೆ ತಾವೂ ಯಾತ್ರೆ ಮಾಡುವುದಾಗಿ ಘೋಷಿಸಿದ್ದಾರೆ. ಇಬ್ಬರ ಡ್ಯಾನ್ಸ್ ನೋಡಿ ಯಾರದು ಇಷ್ಟವಾಯಿತು ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ ಎಂದು ಚುಚ್ಚಿದರು.
ಕಾಂಗ್ರೆಸ್ ಶೋಕಿಗೆ ಪಾದಯಾತ್ರೆ ಮಾಡುತ್ತಿಲ್ಲ. ಬಿಸಿಲು, ಮಳೆ, ಆರೋಗ್ಯದ ಕಡೆ ಗಮನಹರಿಸದೆ ಕಾರ್ಯಕರ್ತರು ನಾಡ ರಕ್ಷಣೆಗಾಗಿ ಯಾತ್ರೆ ಮಾಡುತ್ತಿದ್ದಾರೆ. ಇದನ್ನು ನೋಡಿ ಗಾಬರಿಯಾಗಿ ಮುಖ್ಯಮಂತ್ರಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.
ಪಾದಯಾತ್ರೆಗೆ ನಾವೇನೂ ಸರಕಾರದ ರಕ್ಷಣೆ ಬೇಡಿಲ್ಲ. ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೆ ರಕ್ಷಣೆ ನೀಡಬೇಕಾದ ಜವಾಬ್ದಾರಿ ಸರಕಾರದ್ದು. ಇವರನ್ನು ನಂಬಿ ನಾವು ಯಾತ್ರೆ ಕೈಗೊಂಡಿಲ್ಲ. ರೆಡ್ಡಿಗಳು ಹಣ ಕೊಟ್ಟು ಗಲಾಟೆ ಮಾಡಿಸಲೂ ಸಾಧ್ಯವಿಲ್ಲ. ಕಾರ್ಯಕರ್ತರೇ ನಮಗೆ ಭದ್ರಕೋಟೆ. ಜನ ಬೆಂಬಲದ ಮುಂದೆ ಹಣದ ಆಟ ನಡೆಯುವುದಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಾದಯಾತ್ರೆಗೆ ಜನಬೆಂಬಲ ಕಂಡು ಮುಖ್ಯಮಂತ್ರಿ ಸಹಿತ ಎಲ್ಲರಿಗೂ ಚಳಿಜ್ವರ ಶುರುವಾಗಿದೆ. ಅಧಿವೇಶನದಲ್ಲಿ ಆ ರೀತಿ ಮಾತನಾಡಿದ್ದಕ್ಕೆ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.