ಕಾಂಗ್ರೆಸ್ ಪಾದಯಾತ್ರೆ ದೊಂಬರಾಟವಲ್ಲ. ನಾನು ರಾಖಿ ಸಾವಂತ್ ತರ ಡ್ಯಾನ್ಸ್ ಮಾಡಿಲ್ಲ. ಬಿಜೆಪಿ ಮುಖಂಡರು ಟೀಕೆ ಮಾಡುವಾಗ ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡಿರಲಿ ಎಂದು ಮೇಲ್ಮನೆ ವಿರೋಧ ಪಕ್ಷದ ನಾಯಕಿ ಮೋಟಮ್ಮ ತಿರುಗೇಟು ನೀಡಿದ್ದಾರೆ.
12ನೇ ದಿನದ ಪಾದಯಾತ್ರೆ ಸಂದರ್ಭದಲ್ಲಿ, ವಿಪಕ್ಷ ಕಾಂಗ್ರೆಸ್‌ನ ಪಾದಯಾತ್ರೆ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಾದಯಾತ್ರೆಯ ದೊಂಬರಾಟ ನಡೆಸಿದೆ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ನಾನೇನು ರಾಖಿ ಸಾವಂತ್ ತರ ಡ್ಯಾನ್ಸ್ ಮಾಡುತ್ತಿಲ್ಲ. ಜನಪದ ನೃತ್ಯ, ನಾಡಿನ ಸಾಂಸ್ಕೃತಿಕ ವೈಭವವನ್ನು ಮೆರೆಸುತ್ತಿದ್ದೇವೆ.
ಆಡಳಿತ ಪಕ್ಷದವರು ಟೀಕೆ ಮಾಡಿದಷ್ಟು ನಾನು ಡ್ಯಾನ್ಸ್ ಮಾಡುವುದನ್ನು ಹೆಚ್ಚು ಮಾಡುತ್ತೇನೆ. ನಾನು ಮೂಲತಃ ಕಲಾವಿದೆ. ನೃತ್ಯ ಮಾಡುವ ಮೂಲಕ ನಾಡಿನ ಸಾಂಸ್ಕೃತಿಕ ಸಂಪತ್ತನ್ನು ಉಳಿಸಲು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಸಮಜಾಯಿಷಿ ನೀಡಿದರು.
ನಾಡಿನ ಸಂಪತ್ತು ನಿರಂತರವಾಗಿ ಲೂಟಿಯಾಗುತ್ತಿದೆ. ಆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಸರಕಾರ ಹೋರಾಟ ಮಾಡುವವರನ್ನು ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.