ರಾಜ್ಯದ ಮುಖ್ಯಮಂತ್ರಿಯಾಗಿದ್ದ ನನ್ನ ಅವಧಿಯಲ್ಲಿ ಒಂದೂ ಅಕ್ರಮ ಗಣಿಗಾರಿಕೆಗೆ ಆಸ್ಪದ ಕೊಟ್ಟಿಲ್ಲ. ಅಲ್ಲದೆ ನಾನು ನನ್ನ ಜೀವಮಾನದಲ್ಲಿಯೇ ಗಣಿಗಾರಿಕೆಯನ್ನು ಮಾಡಿಲ್ಲ ಎಂದು ಸಂಸದ ಧರಂಸಿಂಗ್ ಸ್ಪಷ್ಟಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಆರೋಪ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದು ಸಾಬೀತಾದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲೆಸೆದಿದ್ದಾರೆ.
ಆಡಳಿತಾರೂಢ ಬಿಜೆಪಿ ಸರಕಾರ ಸಚಿವ ಸಂಪುಟದಲ್ಲಿರುವ ಭ್ರಷ್ಟರನ್ನು ರಕ್ಷಿಸುವ ಸಲುವಾಗಿ ವಿರೋಧ ಪಕ್ಷದ ಮುಖಂಡರ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿದ ವರದಿಯಲ್ಲಿ ಧರಂ ಸಿಂಗ್ ಅವರ ಕಾಲಾವಧಿಯಲ್ಲಿ ಗಣಿಗಾರಿಕೆಯಿಂದ ರಾಜ್ಯಕ್ಕೆ ಆದ ಸುಮಾರು 20 ಕೋಟಿ ರೂಪಾಯಿ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲು ಸೂಚಿಸಿದ್ದರು. ಆದರೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಆ ವಿಷಯವನ್ನು ತೆಗೆದುಹಾಕಿದ್ದಾರೆ. ಹಾಗಾಗಿ ಈ ಬಗ್ಗೆ ರಾಷ್ಟ್ರಪತಿ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗಷ್ಟೆ ತಿಳಿಸಿದ್ದರು.