ಹಗಲು ಪಾದಯಾತ್ರೆ, ರಾತ್ರಿ ಚಿಕನ್ ಬಿರಿಯಾನಿ: ರಾಜನಾಥ ಸಿಂಗ್
ಗುಲ್ಬರ್ಗ, ಶುಕ್ರವಾರ, 6 ಆಗಸ್ಟ್ 2010( 12:35 IST )
ಹಗಲು ಪಾದಯಾತ್ರೆ ನಡೆಸುವ ರಾಜ್ಯ ಕಾಂಗ್ರೆಸ್ ಮುಖಂಡರು ರಾತ್ರಿ ಚಿಕನ್ ಬಿರಿಯಾನಿ ತಿನ್ನುತ್ತಾರೆ. ಮತ್ತೊಂದೆಡೆ ಬೆಲೆಯೇರಿಕೆ ನಿಯಂತ್ರಿಸದ ಕೇಂದ್ರ ಕಾಂಗ್ರೆಸ್ ಮುಖಂಡರು ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಶ್ರೀನಿವಾಸ ಸರಡಗಿ ಸಮೀಪದ ವಿಮಾನ ನಿಲ್ದಾಣ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಗಲೆಲ್ಲಾ ನೃತ್ಯ, ವೇಷಭೂಷಣಗಳೊಂದಿಗೆ ಪಾದಯಾತ್ರೆ ನಡೆಸುವ ರಾಜ್ಯ ಕಾಂಗ್ರೆಸ್ ಮುಖಂಡರು ರಾತ್ರಿ ಚಿಕನ್ ತಿನ್ನುತ್ತಾರೆ. ಕೇಂದ್ರದಲ್ಲಿರುವ ಕಾಂಗ್ರೆಸಿಗರಿಗೂ ಕೂಡ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಇವರದ್ದು ರಾಜಕೀಯ ಶೋಕಿ ಎಂದು ವಾಗ್ದಾಳಿ ನಡೆಸಿದರು.
ಅನಾವವಶ್ಯಕವಾಗಿ ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಹೋರಾಟ, ಪಾದಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಆದರೆ ರಾಜ್ಯದ ಜನರಿಗೆ ಕಾಂಗ್ರೆಸ್ ಮುಖಂಡರ ನಾಟಕ ತಿಳಿದಿದೆ ಎಂದರು. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.