ರಾಜ್ಯದಲ್ಲಿ ಪಾದಯಾತ್ರೆ ಕೈಕೊಂಡಿರುವ ಕಾಂಗ್ರೆಸ್ಸಿಗೆ ಜನರ ಮನ್ನಣೆ ಸಿಗುವುದಿಲ್ಲ, ಅನಾವಶ್ಯಕವಾಗಿ ಅವರು ಪಾದಯಾತ್ರೆ ನಡೆಸುತ್ತಿರುವುದರ ಹಿಂದೆ ಕುಚೋದ್ಯತನ ಅಡಗಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಅಧ್ಯಕ್ಷ ರಾಜನಾಥ ಸಿಂಗ್ ಆರೋಪಿಸಿದ್ದಾರೆ.
ಗುಲ್ಬರ್ಗದಲ್ಲಿ ಗುರುವಾರ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆ.ಎಸ್.ಈಶ್ವರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಸರಕಾರಕ್ಕೆ ಪಾದಯಾತ್ರೆಯಿಂದ ಯಾವುದೇ ಬಾಧೆ ತಟ್ಟುವುದಿಲ್ಲವೆಂದು ಅವರು ನುಡಿದರು. ಸಿಬಿಐಯನ್ನು ಕೇಂದ್ರ ಸರಕಾರ ತನ್ನ ಮನಬಂದಂತೆ ಬಳಸಿಕೊಳ್ಳುತ್ತಿದೆ. ಪರಿಣಾಮವಾಗಿ ಈ ಸಂಸ್ಥೆಯ ಗೌರವಕ್ಕೆ ಧಕ್ಕೆ ಬಂದಿದೆ ಎಂದು ದೂರಿದರು.
ಗುಜರಾತ್ ಮಾಜಿ ಸಚಿವ ಅಮಿತ್ ಶಾ ನಿಜಕ್ಕೂ ಒಬ್ಬ ಜನಪ್ರೀಯ ಮತ್ತು ಒಳ್ಳೆಯ ವ್ಯಕ್ತಿ. ಇದನ್ನು ಸಹಿಸದ ಕೇಂದ್ರ ಯುಪಿಎ ಸರಕಾರ ಸಿಬಿಐ ಮೂಲಕ ಅವರನ್ನು ಬಲಿಪಶು ಮಾಡಲು ಹೊರಟಿದೆ, ಮುಂದೊಂದು ದಿನ ಇದು ಜನತೆಗೆ ಗೊತ್ತಾಗಲಿದೆ ಎಂದರು.
ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಲೇ ತೈಲ ಬೆಲೆಗಳನ್ನು ಮನಬಂದಂತೆ ಹೆಚ್ಚಿಸಿದೆ. ಪ್ರತಿ ಅಗತ್ಯ ವಸ್ತುವಿನ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರು ಬದುಕುವುದೇ ದುಸ್ಥರವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.