ಕಾಂಗ್ರೆಸ್ ಪಾದಯಾತ್ರೆ ರಾಜಬೀದಿ ಮೂಲಕವೇ ಬಳ್ಳಾರಿ ನಗರ ಪ್ರವೇಶಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಪಾದಯಾತ್ರೆ ಮಾರ್ಗ ಬದಲಾವಣೆ ಮಾಡಲು ಬಿಡುವುದಿಲ್ಲ ಎಂದು ಪಾದಯಾತ್ರೆಯ ನಡುವೆ ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ತಮ್ಮ ಅಭಿಮಾನಿಗಳ ಸಂಘ ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪಾದಯಾತ್ರೆ ಶಾಂತಿಯುತವಾಗಿ ಬಳ್ಳಾರಿಯನ್ನು ಪ್ರವೇಶಿಸಲಿದೆ. ಯಾವುದೇ ಅಹಿತಕರ ಘಟನೆ ತಮ್ಮಿಂದ ನಡೆಯುವುದಿಲ್ಲ. ರೆಡ್ಡಿ ಬಳಗದಿಂದಲೂ ಯಾವುದೇ ಆತಂಕವಿಲ್ಲ. ನಮ್ಮ ಹೋರಾಟ ಶಾಂತಿಯುತವಾಗಿ ನೆರವೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾತ್ರೆ ಸೋಮವಾರ ಮಧ್ಯಾಹ್ನ ಬಳ್ಳಾರಿ ಪ್ರವೇಶಿಸಲಿದೆ. ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು ಕಾಂಗ್ರೆಸ್ ಧ್ವಜ ಹಿಡಿದು ಪಥಸಂಚಲನದೊಂದಿಗೆ ನಗರದೊಳಗೆ ಕಾಲಿಡುತ್ತಾರೆ. ಪಥಸಂಚಲನದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಪ್ರತಿಯೊಬ್ಬರಿಗೂ ಸೂಚನೆ ನೀಡಲಾಗಿದೆ ಎಂದರು.