ಬಿಜೆಪಿ ಪ್ರತಿ ಸಮಾವೇಶಕ್ಕೆ 25 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಇದು ಜನರಿಂದ ಕಬಳಿಸಿದ ಹಣ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಕಾಂಗ್ರೆಸ್ ಮುಖಂಡರು ನಡೆಸುತ್ತಿರುವ ಬೆಂಗಳೂರು-ಬಳ್ಳಾರಿ ಪಾದಯಾತ್ರೆ ಶುಕ್ರವಾರ 13ನೇ ದಿನಕ್ಕೆ ಕಾಲಿಟ್ಟಿದ್ದು, ಮೊಳಕಾಲ್ಮೂರಿನತ್ತ ಪಾದಯಾತ್ರೆ ಸಾಗುತ್ತಿದ್ದ ವೇಳೆ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಬಿಜೆಪಿ ಸಮಾವೇಶದ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಪಾದಯಾತ್ರೆ ಜನಾಂದೋಲನ ಆಗುತ್ತಿರುವುದನ್ನು ಕಂಡು ಬಿಜೆಪಿ ಮುಖಂಡರು ಮತ್ತು ಸರಕಾರ ಭೀತಿಗೊಂಡಿದೆ. ಹಾಗಾಗಿ ಸಾರ್ವಜನಿಕರ ಹಣದಿಂದ ಸಮಾವೇಶ ನಡೆಸಿ ಹಣ ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೀಗ ಆಡಳಿತಾರೂಢ ಬಿಜೆಪಿ ಯಾವ ಆಪರೇಷನ್ ನಡೆಸಿದ್ರೂ ಅದು ಅಬಾರ್ಷನ್ ಆಗುತ್ತೆ ಎಂದು ವ್ಯಂಗ್ಯವಾಡಿದ ಅವರು, ಅಕ್ರಮ ಗಣಿಗಾರಿಕೆ ವಿರುದ್ಧ ಮುಖ್ಯಮಂತ್ರಿಗಳು ವಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಬಾಯ್ಮುಚ್ಚಿ ಕುಳಿತದ್ದೇಕೆ ಎಂದು ಪ್ರಶ್ನಿಸಿದರು.
ಇಂದು ಕೊಂಡ್ಲಹಳ್ಳಿಯಿಂದ ಪಾದಯಾತ್ರೆ ಪುನರಾರಂಭಗೊಂಡಿದ್ದು, ಕಾರ್ಯಕರ್ತರು, ಮುಖಂಡರು ಸಾಕಷ್ಟು ದಣಿದಿದ್ದರು ಕೂಡ ಉತ್ಸಾಹದಿಂದಲೇ ಪಾದಯಾತ್ರೆ ಮುಂದುವರಿಸಿದ್ದಾರೆ. ಮೊಳಕಾಲ್ಮೂರಿನಲ್ಲಿ ಮಧ್ಯಾಹ್ನದ ಊಟೋಪಚಾರ ಮುಗಿಸಿದ್ದ ಕಾಂಗ್ರೆಸ್ ಪಾದಯಾತ್ರೆಯ ದಂಡು ರಾತ್ರಿ ಹಾನಗಲ್‌ನಲ್ಲಿ ವಾಸ್ತವ್ಯ ಹೂಡಲಿದೆ. ಬಳ್ಳಾರಿ ತಲುಪಲು ಇನ್ನು 75ಕಿ.ಮೀ.ಬಾಕಿ ಉಳಿದಿದೆ.
ವಿವಿಧ ಜಾನಪದ ನೃತ್ಯ, ಕಲೆಗಳೊಂದಿಗೆ ಹಾಡುತ್ತ ಕುಣಿಯುತ್ತ ಕಾಂಗ್ರೆಸ್ ಮುಖಂಡರು ಪಾದಯಾತ್ರೆ ನಡೆಸುತ್ತಿದ್ದಾರೆ. ಇಂದಿನ ಪಾದಯಾತ್ರೆಯಲ್ಲಿ ಬಾಗಲಕೋಟೆ, ರಾಯಚೂರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರ ಪಾದಯಾತ್ರೆ ದಂಡು ಹಾನಗಲ್‌ನತ್ತ ಸಾಗಿದೆ.
ಕೊಂಡ್ಲಹಳ್ಳಿಯಿಂದ ಇಂದು ಬೆಳಿಗ್ಗೆ ಕಾಂಗ್ರೆಸ್ ಪಾದಯಾತ್ರೆ ದಂಡು ತಡವಾಗಿ ಹೊರಟಿತ್ತು. ಬಳ್ಳಾರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೇ, ಇಂದಿನ ಪಾದಯಾತ್ರೆಯಲ್ಲಿ ಮಾಜಿ ಸಚಿವ ಕೆ.ಪರಮೇಶ್ವರ್ ಅವರ ಹುಟ್ಟುಹಬ್ಬ ಆಚರಿಸಿಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪರಮೇಶ್ವರ್ ಅವರನ್ನು ಅಭಿನಂದಿಸಿ, ಶುಭ ಹಾರೈಸಿದರು.